ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿ ಸ್ವತಃ ಆಡಳಿತ ಪಕ್ಷದ ಶಾಸಕರೊಬ್ಬರು ರಾಜೀನಾಮೆ ನೀಡಲು ಮುಂದಾಗಿರುವುದು ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ದೂರಿದೆ.
ಸ್ವಪಕ್ಷೀಯ ಶಾಸಕರ ಆಕ್ರೋಶಗಳನ್ನು ಮುಚ್ಚಿ ಹಾಕುವುದೇ ಸಿದ್ದರಾಮಯ್ಯ ಸರ್ಕಾರಕ್ಕೆ ಈಗ ಬಹುದೊಡ್ಡ ಸವಾಲಾಗಿದೆ. ರಾಯರೆಡ್ಡಿ, ಬಿ. ಆರ್. ಪಾಟೀಲ್ ಬಳಿಕ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ತಮ್ಮದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕವಾಗಿ ಮತದಾರರಿಂದ ಚುನಾಯಿಸಲ್ಪಟ್ಟ ಶಾಸಕರ ಮನವಿ, ಬೇಡಿಕೆಗಳು ಕಾಂಗ್ರೆಸ್ ಸರ್ಕಾರದಲ್ಲಿ ಅರಣ್ಯರೋದನೆಯಾಗಿದೆ. ಸ್ವಪಕ್ಷೀಯ ಶಾಸಕರಿಗೂ ನ್ಯಾಯ ಒದಗಿಸಲು ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ.
ಕಾಂಗ್ರೆಸ್ ಸರ್ಕಾರದ ಬಂಡವಾಳಗಳನ್ನು ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪಡಿಸುತ್ತಿದ್ದಾರೆ. ಒಂದು ಕಡೆ ಮಿತಿ ಮೀರಿದ ಭ್ರಷ್ಟಾಚಾರ, ಇನ್ನೊಂದು ಕಡೆ ಅಭಿವೃದ್ಧಿಗೆ ಬಿಡಿಗಾಸೂ ಬಿಡುಗಡೆಯಾಗುತ್ತಿಲ್ಲ. ಸರ್ಕಾರದ ವಿರುದ್ಧ ಕಾಂಗ್ರೆಸ್ ಹಿರಿಯ ಶಾಸಕ ರಾಜು ಕಾಗೆ ಅವರು ಆಕ್ರೋಶ ವ್ಯಕ್ತಪಡಿಸಿ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳೇ, ನಿಮ್ಮದೇ ಪಕ್ಷದ ಶಾಸಕರನ್ನು ಮೆಚ್ಚಿಸುವ ಆಡಳಿತ ನೀಡಲು ನಿಮ್ಮ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನೀವು ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತುಕೊಳ್ಳುವುದು ಉತ್ತಮ. ರಾಜು ಕಾಗೆಯವರ ಬಾಯಿಮುಚ್ಚಿಸಲು ಹೋರಾಡುತ್ತೀರಾ ಅಥವಾ ಉತ್ತಮ ಆಡಳಿತ ನೀಡುವತ್ತ ಗಮನಿಸುತ್ತೀರಾ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

