ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಂಗಲ್‌ಹನುಮಂತಯ್ಯನವರು ಬಿಟ್ಟು ಹೋಗಿರುವ ಸಾಕ್ಷಿ ವಿಧಾನಸೌಧ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ನಿರ್ಮಾತೃ, ಮೈಸೂರು ರಾಜ್ಯದ 2ನೇ ಮುಖ್ಯಮಂತ್ರಿಗಳು, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ರಾಜ್ಯ ಕಂಡ ಹೆಮ್ಮೆಯ ನಾಯಕರಾದ ಕೆಂಗಲ್‌ಹನುಮಂತಯ್ಯನವರ ಪುಣ್ಯಸ್ಮರಣೆಯ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಿ, ಅವರು ಮಾತನಾಡಿದರು.
ವಿಧಾನಸೌಧವನ್ನು ಕೆಂಗಲ್‌ಹನುಮಂತಯ್ಯನವರು ಕಟ್ಟಿದ್ದಾರೆ, ವಿಕಾಸಸೌಧವನ್ನು ಎಸ್.ಎಂ ಕೃಷ್ಣ ಅವರು ಕಟ್ಟಿದ್ದಾರೆ, ಬೆಂಗಳೂರನ್ನು ಕೆಂಪೇಗೌಡರು ಕಟ್ಟಿದ್ದಾರೆ. ಇವೆಲ್ಲವೂ ಇಂದು ಸಾಕ್ಷಿಗಳಾಗಿ ಉಳಿದುಕೊಂಡಿವೆ. ನಮ್ಮ ಬೆಂಗಳೂರು ಎಲ್ಲದರಲ್ಲೂ ಉತ್ತಮವಾದ ಹಾಗೂ ಶ್ರೇಷ್ಠವಾದ ಜಾಗವಾಗಿದೆ.
ಅಂದು ಕೆಂಗಲ್‌ಹನುಮಂತಯ್ಯನವರು ಮುನ್ನುಡಿ ಬರೆದಿದ್ದಕ್ಕೆ ನಾವೆಲ್ಲರೂ ಇಲ್ಲಿದ್ದೇವೆ. ಅಧಿಕಾರ ಸಿಕ್ಕಾಗ ವಿಧಾನಸೌಧದಂತಹ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಡಿಸಿಎಂ ಶಿವಕುಮಾರ್ ಕರೆ ನೀಡಿದರು.

