ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಕು ಸಂಬಳ – ಬೇಕು ನೆಮ್ಮದಿ…..ಜೈಲಿನ ಗೋಡೆಗಳ ನಡುವೆ……. ನನ್ನೊಳಗಿನ ಜ್ಞಾನೋದಯ ನಿಮ್ಮೊಳಗೂ ಆಗಬಾರದೇ…… ಲೋಕಾಯುಕ್ತ ದಾಳಿ ಮತ್ತು ಮುದ್ದೆ ಸೊಪ್ಪಿನ ಸಾರು……………ಕಂತೆ ಕಂತೆಗಳ ನಡುವೆ ಮಗುವಿನ ಮುಗ್ದತೆಗೆ ಮನಸ್ಸು ಮರಳಬಾರದೇ…..ನನ್ನ ಬಾಲ್ಯದಲ್ಲಿ ವಾರ ಪೂರ್ತಿ ಒಂದೇ ಹರಿದ ಬಟ್ಟೆ ಧರಿಸುತ್ತಿದ್ದೆ.
ವಾರದಲ್ಲಿ ಒಂದೇ ದಿನ ಅಂದರೆ ಭಾನುವಾರ ಮಾತ್ರ ಸ್ನಾನ. ಪ್ರತಿದಿನ ಮುಂಜಾನೆ ಕಾಡಿಗೆ ಹೋಗಿ ಒಣಗಿದ ಸೌದೆ ತರಬೇಕಾಗಿತ್ತು. ಪ್ರತಿದಿನದ ಊಟ ರಾತ್ರಿಯ ತಂಗಳು ಮತ್ತು ಬೆಳಗಿನ ಗಂಜಿ ಮಾತ್ರ. ಶಾಲೆಯ ಮಧ್ಯಾಹ್ನದ ಉಪ್ಪಿಟ್ಟೇ ನನಗೆ ಪಂಚಾಮೃತ.
ರಾತ್ರಿ ಸೀಮೆಎಣ್ಣೆಯ ಬುಡ್ಡಿ ದೀಪಗಳೇ ನಮಗೆ ಬೆಳಕಿನ ಮೂಲಗಳು. ಸರ್ಕಾರದ ಪಾಳುಬಿದ್ದ ಕಟ್ಟಡಗಳೇ ನಮ್ಮ ಶಾಲಾ ತರಗತಿಗಳು. ಅತ್ಯುತ್ತಮ ಶಿಕ್ಷಕರ ಜೊತೆ ಕ್ರೌರ್ಯತೆ ಇದ್ದ ಶಿಕ್ಷಕರೂ ನಮ್ಮ ಮೇಷ್ಟುಗಳು. ಆದರೂ SSLC ಪರೀಕ್ಷೆಯಲ್ಲಿ FIRST CLASS ನಲ್ಲಿ ಪಾಸಾದೆ.
ಅನಂತರ PUC ಮತ್ತು BA ಕೂಡ ಸರ್ಕಾರಿ ಕಾಲೇಜಿನಲ್ಲೇ ಓದಿ ಒಳ್ಳೆಯ ಅಂಕಗಳೊಂದಿಗೆ ಪಾಸಾದೆ. ಆಗಲೂ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದುದು ಕೇವಲ ಮದುವೆ ಸಮಾರಂಭಗಳಲ್ಲಿ ಮಾತ್ರ.
ಸೇಬು ಹಣ್ಣು ನಾನು ಕೆಲಸಕ್ಕೆ ಸೇರುವವರೆಗೂ ತಿಂದೇ ಇರಲಿಲ್ಲ. ಹಾಗೂ ಹೀಗೂ ಕಷ್ಟಪಟ್ಟು ಓದಿ KAS ( KPSC ) ಬರೆದು ಅದರಲ್ಲಿ SELECT ಆದೆ.
ಯಾರದೋ ಕ್ಯೆಕಾಲು ಹಿಡಿದು ತಹಶೀಲ್ದಾರ್ ಆಗಿ ನೇಮಕವಾದೆ. ಬಾಲ್ಯ, ಯೌವನದ ಹಸಿವು ಅವಮಾನಗಳು ಒಮ್ಮೆಲೇ ಎಗರಿ ಬಿದ್ದವು, ಸಂಬಳದ ಜೊತೆಗೆ ಕುಳಿತಲ್ಲೇ ಲಕ್ಷಾಂತರ ಹಣ ಲಂಚದ ರೂಪದಲ್ಲಿ ಹರಿದು ಬರತೊಡಗಿತು.
ಹಣ ಎಲ್ಲಿ ಇಡುವುದು ಎಂಬುದೇ ಸಮಸ್ಯೆಯಾಯಿತು. ಬಡತನದಲ್ಲಿ ನನ್ನನ್ನು ಮೂದಲಿಸಿದ್ದ ತುಚ್ಚವಾಗಿ ಕಂಡಿದ್ದ ನಾಯಿ ನರಿಗಳು ಕೂಡ ಮಹಾರಾಜನಂತೆ ನೋಡತೊಡಗಿದರು.
ಪ್ರತಿದಿನವೂ ಭರ್ಜರಿ ಸಂತೋಷ ಕೂಟಗಳೇ ಶ್ರೀಮಂತ ಹೋಟೇಲ್ ಗಳಲ್ಲಿ. ಬೇರೆ ಬೇರೆ ಕಡೆ ಆಸ್ತಿಗಳು ನನ್ನ ಹೆಸರಿಗೆ ಸೇರತೊಡಗಿದವು, ಸ್ವರ್ಗಕ್ಕೆ ಮೂರೇ ಗೇಣು. ನನಗೆ ಗೊತ್ತಿಲ್ಲದೆ ನನ್ನ ಅಹಂಕಾರವೂ ಮೇರೆ ಮೀರಿತ್ತು. ಬಾಲ್ಯದ ಕೀಳರಿಮೆ ಅದಕ್ಕೆ ಕಾರಣವಾಗಿರಬಹುದು.
ಆದರೆ……….,
ಒಂದು ಬೆಳಗಿನ ಜಾವ ಇದ್ದಕ್ಕಿದ್ದಂತೆ ಲೋಕಾಯುಕ್ತ ಪೊಲೀಸರಿಂದ ನನ್ನ ಮನೆ ಮೇಲೆ ದಾಳಿ, ಎಚ್ಚೆತ್ತುಕೊಳ್ಳುವ ಮುನ್ನ ಎಲ್ಲಾ ಬಟಾ ಬಯಲು, ಬೆಳಕು ಹರಿಯುವ ಮುನ್ನ ಅಪಾರ ಹಣ ಆಸ್ತಿ ವಶ. ಟಿವಿಯಲ್ಲಿ ಮಾನ ಹರಾಜು, ಬಂಧನ, ಸಂಜೆಯೊಳಗೆ ಜೈಲಿಗೆ ರವಾನೆ.
ಈಗ ತಾನೇ ಕ್ಯೂನಲ್ಲಿ ನಿಂತು, ತಟ್ಟೆ ಹಿಡಿದು ಊಟ ಹಾಕಿಸಿಕೊಂಡು ಮುದ್ದೆ ಮುರಿಯುತ್ತಿದ್ದೇನೆ. ಈಗ, ಒಮ್ಮೆಗೇ ಆ ಬಡತನದ ದಿನಗಳು ನೆನಪಾಗುತ್ತಿವೆ.
ಕಣ್ಣ ನೀರು ತಟ್ಟೆಗೆ ಬೀಳುತ್ತಿದೆ. ಆ ದಿನಗಳು, ಆ ಬೆಳದಿಂಗಳ ರಾತ್ರಿಗಳಲ್ಲಿ ಮನೆಯ ಮುಂದೆ ತಿನ್ನುತ್ತಿದ್ದ ಮುದ್ದೆ ಸೊಪ್ಪಿನ ಸಾರು ಯಾಕೋ ನೆನಪಾಗುತ್ತಿದೆ.
ಈ ನೋವಿನಲ್ಲೂ ಆ ಮಧುರ ನೆನಪುಗಳು ಮುದ ನೀಡುತ್ತಿದೆ. ಹಾಗೇ ಅತ್ತು ಅತ್ತು ಮನಸ್ಸು ಹಗುರಾಯಿತು. ಬದುಕಿನ ನಿಜ ಅರ್ಥ ಅರಿವಾಯಿತು. ಎಲ್ಲವನ್ನೂ ಕಳೆದುಕೊಂಡರೂ ನನ್ನನ್ನು ನಾ ಪಡೆದೆ ಎಂಬ ಸಮಾಧಾನದ ಭಾವ ಮೂಡಿತು.
ಆಡಂಬರದ ಅಹಂಕಾರದ ಜೀವನಕ್ಕಿಂತ ಸಹಜ ಸರಳ ಪ್ರಾಮಾಣಿಕ ಬದುಕೇ ನೆಮ್ಮದಿಯ ತಾಣ ಎಂಬ ಜ್ಞಾನೋದಯವಾಯಿತು……..
ಲೇಖನ:ವಿವೇಕಾನಂದ. ಎಚ್. ಕೆ. 9844013068…….