ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಯಾರೋ ಕೆಲವು ಕಿಡಿಗೇಡಿಗಳು ನನ್ನ ಕಚೇರಿಯ ನಕಲಿ ಟಿಪ್ಪಣಿಯೊಂದನ್ನು ಸೃಷ್ಟಿಸಿ, ಮಂಡ್ಯ ಜಿಲ್ಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾದ ಡಾ.ಕೆ.ಮೋಹನ್ ಇವರನ್ನು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಮತ್ತು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನನ್ನ ಸಚಿವಾಲಯದ ಅಧಿಕಾರಿಗಳು ದೂರು ದಾಖಲಿಸಿದ್ದು, ಪೊಲೀಸ್ ಇಲಾಖೆ ಇದರ ಹಿಂದಿರುವ ದುಷ್ಟರನ್ನು ಪತ್ತೆ ಮಾಡಿ, ಕಾನೂನು ಕ್ರಮ ಕೈಗೊಳ್ಳಲಿದೆ.
ಇಂತಹ ನಕಲಿ ಸುದ್ದಿಗಳನ್ನು ನಂಬಿ ಶೇರ್ ಮಾಡುವ ಮುನ್ನ ಜಾಲತಾಣ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಈಗಿನ ಫೋಟೋಶಾಪ್ / ಎಐ ಯುಗದಲ್ಲಿ ವಾಟ್ಸ್ ಆ್ಯಪ್ ಮಾಹಿತಿಗಳ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ಇತರರ ಜೊತೆ ಹಂಚಿಕೊಳ್ಳುವುದು ಕೂಡ ಅಪರಾಧವೆ ಆಗಿದೆ.
ಸಕಾರಾತ್ಮಕ ಟೀಕೆಗೆ ನಾವು ಮುಕ್ತರಿದ್ದೇವೆ, ಸುಳ್ಳು ಸುದ್ದಿಗಳ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

