ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಚಿತ್ರದುರ್ಗದ ಲೋಕಸಭಾ ಸದಸ್ಯ ಗೋವಿಂದ ಎಂ.ಕಾರಜೋಳ ರವರು ಮಂಗಳವಾರ ಲೋಕಸಭಾ ಅಧಿವೇಶದಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಾಣಂತಿಯರ ಸಾವುಗಳ ಕುರಿತು ಶೂನ್ಯ ವೇಳೆಯಲ್ಲಿ ಧ್ವನಿ ಎತ್ತಿದ್ದಾರೆ. ನಾಗರಿಕರ ಸುರಕ್ಷತೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಫಲಾಯನವನ್ನು ಕಟುವಾಗಿ ಟೀಕಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರೊಗ್ಯ ಕ್ಷೇತ್ರಕ್ಕೆ ಈ ಹಿಂದೆ ಯಾವ ಸರ್ಕಾರಗಳು ನೀಡದಷ್ಟು ಆದ್ಯತೆ ನೀಡ್ತಾ ಇದೆ. ೨೦೨೪-೨೫ ನೇ ಸಾಲಿನ ಬಜೆಟನ್‌ನಲ್ಲಿ ಸುಮಾರು ೯೦,೬೫೯ ಕೋಟಿಗಳಷ್ಟು ಅನುದಾನ ಹಂಚಿಕೆ ಮಾಡುವ ಮೂಲಕ ಬದ್ದತೆ ಮೆರೆದಿದೆ.
ಆದರೆ, ಕೇಂದ್ರ ಸರ್ಕಾರದ ಪ್ರಬಲ ಇಚ್ಚಾಶಕ್ತಿಯ ನಡುವೆಯೂ, ಕೆಲವು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತೆಯಿಂದಾಗಿ, ಜನಪರ ಕಾಳಜಿ ಇಲ್ಲದೇ ಇರುವ ಕಾರಣದಿಂದಾಗಿ ಬಡ ಜನರು, ಕೂಲಿ ಕಾರ್ಮಿಕರು, ಸರ್ಕಾರಿ ಆಸ್ಪತ್ರೆಗಳಿಗೆ ಬರುವುದಕ್ಕೆ ಹಿಂದೇಟು ಹಾಕ್ತಾ ಇದ್ದಾರೆ. ಇದಕ್ಕೆ ಪೂರಕವೆಂಬಂತೆ ಕರ್ನಾಟಕದಲ್ಲಿ ಬಾಣಂತಿಯರ ಸರಣಿ ಸಾವುಗಳು ಸಂಭವಿಸುತ್ತಿವೆ ಎಂದು ಲೋಕಸಭಾಧ್ಯಕ್ಷರ ಗಮನ ಸೆಳೆದರು.
ಕರ್ನಾಟಕದಲ್ಲಿ ಕಳೆದ ನಾಲ್ಕೈದು ತಿಂಗಳಲ್ಲಿ ೨೮ ಕ್ಕೂ ಹೆಚ್ಚು ಬಾಣಂತಿಯರ ಸಾವುಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸಿವೆ. ಅದರಲ್ಲೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ ತಿಂಗಳೊಂದರಲ್ಲೇ ೪ ಬಾಣಂತಿಯರು ಸಾವಿಗೀಡಾಗಿದ್ದಾರೆ. ಇದು ಕೇವಲ ದುರಂತ ಅಲ್ಲ, ಕರ್ನಾಟಕ ಕಾಂಗ್ರೆಸ್ ಸರ್ಕಾರದ ಘೋರ ನಿರ್ಲಕ್ಷ್ಯ ಮತ್ತು ಸಂಪೂರ್ಣ ಅದಕ್ಷತೆಯಿಂದಾಗಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ತನ್ನ ನಾಗರಿಕರ ಸುರಕ್ಷತೆ ಮತ್ತು ಘನತೆಯನ್ನು ಖಾತ್ರಿಪಡಿಸುವ ಮೂಲಭೂತ ಕರ್ತವ್ಯದಿಂದ ಕಾಂಗ್ರೆಸ್ ಸರ್ಕಾರ ಫಲಾಯನ ಮಾಡಿದೆ ಎಂದು ಆರೋಪಿಸಿದರು.
ಮೆಡಿಕಲ್ ಹಾಗೂ ಔಷಧ ಮಾಫಿಯಾಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಮಣಿದಿದೆ ಎಂದು ನಾನು ನೇರವಾಗಿ ಆರೋಪ ಮಾಡ್ತೀನಿ, ಇಲ್ಲದೇ ಇದ್ದರೆ ಇವತ್ತು ಯಾವ Intra-venous ದ್ರಾವಣದಿಂದ ಬಾಣಂತಿಯರ ಸಾವುಗಳು ಸಂಭವಿಸಿದೆ ಎಂದು ಹೇಳಲಾಗುತ್ತಿದೆಯೋ ಅದೇ ದ್ರಾವಣವನ್ನು ಬಳಕೆ ಮಾಡಬಾರದು ಎಂದು ಔಷಧಿ ನಿಯಂತ್ರಕರು ವರದಿ ನೀಡಿದಾಗ್ಯೂ ಕೂಡ ದ್ರಾವಣವನ್ನು ಸರಬರಾಜು ಮಾಡುವ ಮೂಲಕ ರಾಜ್ಯ ಸರ್ಕಾರ ಬಾಣಂತಿಯರ ಸಾವಿಗೆ ಕಾರಣವಾಗಿದೆ ಎಂದು ಕಾರಜೋಳ ಟೀಕಿಸಿದರು.
ಪಶ್ಚಿಮ ಬಂಗಾಳದ ಈ ಔಷಧ ಕಂಪನಿಯ ಔಷಧವನ್ನು ತರಲು ಅನುಮತಿ ನೀಡಿದ್ದು ಹೇಗೆ ಎನ್ನುವ ಸತ್ಯ ರಾಜ್ಯದ ಜನರಿಗೆ ತಿಳಿಯಬೇಕಾಗಿದೆ. ಔಷಧ ಖರೀದಿ ಮೇಲೆ ಪ್ರಭಾವ ಬೀರುತ್ತಿರುವ ಮೆಡಿಕಲ್ ಹಾಗೂ ಔಷಧ ಮಾಫಿಯಾವನ್ನು ಸ್ವತ: ಮುಖ್ಯಮಂತ್ರಿಗಳೇ ಒಪ್ಪಿಕೊಂಡಿರುವುದು ಆಘಾತಕಾರಿ ಸಂಗತಿಯಾಗಿದೆ.
ಮೆಡಿಕಲ್ ಹಾಗೂ ಔಷಧ ಮಾಫಿಯಾ ಸಕ್ರಿಯಗೊಳಿಸುವವರು ಯಾರು? ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರವನ್ನು ಅಂತಹ ನಿರ್ಣಾಯಕ ವಲಯದಲ್ಲಿ ನುಸುಳಲು ಅವಕಾಶ ಕಲ್ಪಿಸುವ ಮೂಲಕ ಜನರ ಜೀವಗಳನ್ನು ಅಪಾಯದಂಚಿಗೆ ತಳ್ಳಿದೆ ಎಂದು ಸಂಸದರು ದೂರಿದರು.
ಈ ಸಾವುಗಳಿಗೆ ನೇರವಾಗಿ ರಾಜ್ಯ ಸರ್ಕಾರವನ್ನೇ ಹೊಣೆ ಮಾಡಬೇಕಾಗುತ್ತದೆ. ಈ ದ್ರಾವಣ ರಾಜ್ಯದ ಎಷ್ಟು ಜಿಲ್ಲೆಗಳಿಗೆ ಸರಬರಾಜಾಗಿದೆ, ಅಲ್ಲಿ ಎಷ್ಟು ಸಾವುಗಳು ಸಂಭವಿಸಿವೆ ಎಂಬುದರ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕಾಗಿದೆ. ರಾಜ್ಯ ಸರ್ಕಾರ ಪ್ರಕರಣವನ್ನು ಎಸ್ಐಟಿಗೆ ವಹಿಸುವ ಮೂಲಕ ಕೈತೊಳೆದುಕೊಂಡಿದೆ.
ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಯಲು ಕೇಂದ್ರದ ಆರೋಗ್ಯ ಸಚಿವಾಲಯವೇ ಮಧ್ಯಪ್ರವೇಶ ಮಾಡಿ ರಾಜ್ಯ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡಿ ತನಿಖೆ ಮಾಡಿಸಲಿ ಎಂದು ಸಂಸದ ಗೋವಿಂದ ಕಾರಜೋಳ ಮನವಿ ಮಾಡಿದರು.
ಇಂತಹ ಪ್ರಕರಣಗಳು ಪದೇ ಪದೇ ಮರುಕಳಿಸಿದರೆ, ಬಡಜನರು, ಕೂಲಿ ಕಾರ್ಮಿಕರು ಯಾವ ಭರವಸೆ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಾರೆ. ಆಸ್ಪತ್ರೆಗಳಿಗೆ ಬರುವ ತಾಯಿ-ಮಕ್ಕಳು ಸುರಕ್ಷಿತವಾಗಿ, ಆರೋಗ್ಯಭರಿತವಾಗಿ ಮನೆಗಳಿಗೆ ಮರಳುವಂತಾಗಬೇಕು.
ಇಂತಹ ವಾತಾವರಣವನ್ನು ಕಲ್ಪಿಸುವ ಕೊಡುವುದು ಬದ್ದತೆಯಿರುವ ಪ್ರತಿಯೊಂದು ರಾಜ್ಯ ಸರ್ಕಾರದ ಕರ್ತವ್ಯವಾಗಬೇಕು ಮತ್ತು ಅದ್ಯತೆಯಾಗಬೇಕು. ಜನರಿಗೆ ಬಿಟ್ಟಿಭಾಗ್ಯಗಳ ಜೊತೆಗೆ ಉಚಿತ ಸಾವಿನ ಭಾಗ್ಯವೂ ಲಭಿಸದೇ ಇರಲಿ ಅನ್ನೋದು ನಮ್ಮ ಕಳಕಳಿಯಾಗಿದೆ ಎಂದು ಸಭಾಧ್ಯಕ್ಷರಲ್ಲಿ ಅವರು ಮನವಿ ಮಾಡಿದರು.
ನಾನು ತಮ್ಮ ಮೂಲಕ ಆರೋಗ್ಯ ಸಚಿವರಲ್ಲಿ ವಿನಂತಿ ಮಾಡೋದೇನೆಂದರೆ, ದೇಶದಲ್ಲಿ ಮೆಡಿಕಲ್ ಹಾಗೂ ಔಷಧ ಮಾಫಿಯಾ ನಿಷ್ಕ್ರಿಯೆಗೊಳಿಸಬೇಕಾಗಿದೆ. ಜನರಿಗೆ ಜೀವ ಭದ್ರತೆಯ ಖಾತರಿ ನೀಡಬೇಕಾದ ಅವಶ್ಯಕತೆಯಿದೆ. ಜನರು ವಿಶ್ವಾಸವಿಟ್ಟು ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವಂತೆ ಮಾಡಬೇಕಾಗಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಸನ್ಮಾನ್ಯ ಆರೋಗ್ಯ ಸಚಿವರು ಮಾರ್ಗದರ್ಶನ ನೀಡುವ ಮೂಲಕ ಅಮೂಲ್ಯ ಜೀವಗಳನ್ನು ರಕ್ಷಣೆ ಮಾಡಬೇಕು ಎಂದು ಲೋಕಸಭಾ ಸದಸ್ಯ ಗೋವಿಂದ್ ಕಾರಜೋಳ ಮನವಿ ಮಾಡಿದರು.