ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾರಣಾಂತಿಕ ಖಾಯಿಲೆ ಇದೆ ಎನ್ನುವ ಕಾರಣಕ್ಕೆ ಒಡ ಹುಟ್ಟಿದೆ ಸಹೋದರಿಯೇ ತನ್ನ ತಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ದುಮ್ಮಿ ಗ್ರಾಮದ ಮಲ್ಲಿಕಾರ್ಜುನ(23) ಎನ್ನುವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ವೇಳೆ ಮಾರಣಾಂತಿಕ ಖಾಯಿಲೆ ಇರುವುದು ಪತ್ತೆಯಾಗಿದೆ.
ಇದರಿಂದ ಮರ್ಯಾದೆಗೆ ಅಂಜಿದ ಅಕ್ಕ, ಹೆಚ್ಚಿನ ಚಿಕಿತ್ಸೆಗೆಂದು ಆಂಬ್ಯುಲೆನ್ಸ್ ನಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗಲೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಬಳಿ 23 ವರ್ಷದ ಮಲ್ಲಿಕಾರ್ಜುನ ಸಂಚರಿಸುತ್ತಿದ್ದ ಕಾರು ಅಪಘಾತವಾಗಿ ಕಾಲಿಗೆ ಗಂಭೀರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ತೆರಳಿದಾಗ ಆಪರೇಷನ್ ಮಾಡುವ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದರು.
ಅಷ್ಟೇ ಅಲ್ಲ ತಪಾಸಣೆ ವೇಳೆ ಮಾರಣಾಂತಿಕ ಖಾಯಿಲೆ ಇರುವುದಾಗಿ ವೈದ್ಯಾಧಿಕಾರಿಗಳು ಕುಟುಂಬದವರಿಗೆ ಮಾಹಿತಿ ನೀಡಿದ್ದರು.
ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಆದರೆ ತಮ್ಮನಿಗೆ ಮಾರಣಾಂತಿಕ ಖಾಯಿಲೆ ಇರುವುದನ್ನು ಅಕ್ಕ ಸಹಿಸಲಿಲ್ಲ. ಎಲ್ಲಿ ಮನೆಯ ಮರ್ಯಾದೆ ಹೋಗುತ್ತೋ ಎನ್ನುವ ಕಾರಣಕ್ಕೆ ಮಣಿಪಾಲ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಕ್ಕ-ಭಾವ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ತಮಗೆ ಇದ್ದ ಒಬ್ಬನೇ ತಮ್ಮ ಮರಣ ಹೊಂದಿದರೆ ಆಸ್ತಿ ಎಲ್ಲ ನನ್ನ ಪಾಲಾಗಲಿದೆ ಎನ್ನುವ ಕಾರಣಕ್ಕೂ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ.
ಮೃತ ತಂದೆ ನಾಗರಾಜ್ ಅವರು ಹೊಳಲ್ಕೆರೆ ಠಾಣೆಗೆ ದೂರು ನೀಡಿದಾಗ ಅಸಲಿ ಸತ್ಯ ಗೊತ್ತಾಗಿದೆ ಎನ್ನಲಾಗಿದೆ.

