ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಈಗ ಹನಿಟ್ರ್ಯಾಪ್ ಬ್ರಿಗೇಡ್ ಗಳದ್ದೇ ಸದ್ದು!! ಎಂದು ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.
ಸಂತ ಶರಣರ ನಾಡಾಗಿದ್ದ ಕಲ್ಬುರ್ಗಿ, ರೌಡಿ-ಗೂಂಡಾ-ಹನಿಟ್ರ್ಯಾಪ್ ಬ್ರಿಗೇಡ್, ಗಾಂಜಾ ನಾಡಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ಸಂಗತಿ ಎಂದು ಬೇಸರ ವ್ಯಕ್ತ ಪಡಿಸಿದೆ.
ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಕಾಂಗ್ರೆಸ್ ನ ಕಾರ್ಯಕರ್ತರೆ, ಹನಿಟ್ರ್ಯಾಪ್ ಬಲೆಗೆ ಕೆಡುವುತ್ತಾರೆಂದರೆ, ಕಾಂಗ್ರೆಸ್ಸಿಗರಲ್ಲಿ ಎಲ್ಲವೂ ಸರಿಯಿಲ್ಲ ಎಂದರ್ಥ!! ಎಂದು ಬಿಜೆಪಿ ಅಚ್ಚರಿ ವ್ಯಕ್ತ ಪಡಿಸಿದೆ.
ಪ್ರಿಯಾಂಕ ಖರ್ಗೆ ಅವರೆ, ನಿಮ್ಮ ಕಾರ್ಯಕರ್ತರ ಹಾಗೂ ನಾಯಕರ ನಡುವಿನ ಹನಿಟ್ರ್ಯಾಪ್ ನ ಫ್ಯಾಕ್ಟ್ ಚೆಕ್ ಅನ್ನು ಯಾವಾಗ ಮಾಡಿಸುವಿರಿ..??!! ಎಂದು ಬಿಜೆಪಿ ಲೇವಡಿ ಮಾಡಿದೆ.
ಏನಿದು ಪ್ರಕರಣ-
ಕಾಂಗ್ರೆಸ್‌ಪಕ್ಷದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರಿಗೆ ವಾಟ್ಸಪ್ ಮೂಲಕ ವಿಡಿಯೋ ಕರೆಗಳನ್ನು ಮಾಡಿ ಅವುಗಳನ್ನು ರೆಕಾರ್ಡ್‌ಮಾಡಿಕೊಂಡು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಲಬುರಗಿ ಘಟಕದ ನಲಪಾಡ್ ಬ್ರಿಗೇಡ್‌ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಗುತ್ತೇದಾರ್ ಅವರೊಂದಿಗೆ ನಡೆಸಿದ ಆಡಿಯೋ-ವಿಡಿಯೋ ಬಹಿರಂಗಗೊಳಿಸದಿರಲು 20 ಲಕ್ಷ ಕ್ಕೆ ಬೇಡಿಕೆ ಇಟ್ಟಿದ್ದ ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್‌ಪಾಟೀಲರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುಳಾ ಪಾಟೀಲ್ ಹನಿ ಟ್ರ್ಯಾಪ್ ಖೆಡ್ಡಾಗೆ ಮಾಜಿ ಸಚಿವರಷ್ಟೇ ಅಲ್ಲ, ಇನ್ನು ಗಣ್ಯರನ್ನು ಖೆಡ್ಡಾಗೆ ಬೀಳಿಸಿರುವ ಮಾಹಿತಿ ಆಕೆಯ ಮೊಬೈಲ್‌ನಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲಿ ಸಕ್ರಿಯವಾಗಿದ್ದು ಮಂಜುಳಾ ಹಲವು ವರ್ಷಗಳಿಂದ ಜಿಲ್ಲೆಯ ಮಹಮ್ಮದ್ ನಲಪಾಡ್ ಬ್ರಿಗೇಡ್ ಅಧ್ಯಕ್ಷೆಯಾಗಿದ್ದಳು. ಹೀಗಾಗಿ ಮಾಲೀಕಯ್ಯಗೆ ಆಕೆಯ ಪರಿಚಯವಾಗಿತ್ತು. ಇಬ್ಬರೂ ದಿನ ಮೊಬೈಲ್‌ನಲ್ಲಿ ಸಲುಗೆಯಿಂದ ಮಾತನಾಡುತ್ತಿದ್ದು ಆ ಎಲ್ಲ ಮಾತುಗಳನ್ನು ಆಕೆ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಈ ನಡುವೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಮಂಜುಳಾ, ಆ ಆಡಿಯೋ-ವಿಡಿಯೋಗಳನ್ನು ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.
ಡೀಲ್ ಕುದುರಿಸಲು ಬೆಂಗಳೂರಿಗೆ ಆಗಮಿಸಿದ್ದ ದಂಪತಿ ಮಾಲೀಕಯ್ಯ ಪುತ್ರ ರಿತೀಶ್ ಅವರನ್ನು ಭೇಟಿಯಾಗಿದ್ದರು.
ಈ ವಿಚಾರವಾಗಿ ರಿತೇಶ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ನಂತರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಕೋರ್ಟ್ ಎಂಟು ದಿನ ಪೊಲೀಸ್‌ಕಸ್ಟಡಿಗೆ ನೀಡಿ ಆದೇಶಿಸಿದೆ.
ಬಂಧಿತ ಆರೋಪಿ ಮಂಜುಳಾ ಪಾಟೀಲ್ ಬಳಿ 6 ಸ್ಮಾರ್ಟ್ ಪೋನ್ ಪತ್ತೆಯಾಗಿದ್ದು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಪರಿಶೀಲಿಸಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.
ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ, ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿದ್ದು, ಈ ಬಗ್ಗೆ ಸಿಸಿಬಿ ಪೊಲೀಸರು ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದು ತನಿಖೆ ಮುಂದುವರೆಸಿದ್ದಾರೆ.