ಸರ್ಕಾರದ ನಿರ್ಲಕ್ಷ, ಸಂಭ್ರಮಾಚರಣೆ ಬದಲು ಶೋಕಾಚರಣೆ- ಶಾಸಕರ ಕಿಡಿ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ರಾಜ್ಯದಲ್ಲಿ ಸಂಭ್ರಮಾಚರಣೆ ಮಾಡಬೇಕಿದ್ದ ಸಮಯದಲ್ಲಿ ಶೋಕಾಚರಣೆ
  ಮಾಡುವಂತಾಗಿದೆ ಈ ಕೃತ್ಯಕ್ಕೆ  ಅಧಿಕಾರಿಗಳ ನಿರ್ಲಕ್ಷತೆ  ಹಾಗೂ ರಾಜ್ಯ ಸರ್ಕಾರದ ನಿಲುವು ಕಾರಣ ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು  ಮೃತಪಟ್ಟ 11 ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಲಿ ಇಲ್ಲವೇ ರಾಜೀನಾಮೆ ನೀಡಲಿ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು ಆಗ್ರಹಿಸಿದರು.

 ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ಐಪಿಎಲ್ ವಿಜಯೋತ್ಸವದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 40ಕ್ಕೂ ಮಂದಿ ಗಾಯಗೊಂಡಿದ್ದಾರೆ,ಮೃತಪಟ್ಟವರ ಕುಟುಂಬದ ವಾರಸುದಾರರಿಗೆ  ಕೇವಲ ರೂ.10 ಲಕ್ಷ ಪರಿಹಾರ ಘೋಷಣೆ ಮಾಡುವ ಮೂಲಕ  ರಾಜ್ಯ ಸರ್ಕಾರ  ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟಿದೆ , ಇದು ಆಕಸ್ಮಿಕ ಘಟನೆಯಲ್ಲ ಯಾವುದೇ  ರೂಪರೇಷೆಗಳಿಲ್ಲದೆ , ಸೂಕ್ತ ಭದ್ರತೆ ಕಲ್ಪಿಸದೆ ಕಾರ್ಯಕ್ರಮ ಮಾಡಲು ಹೊರಟ ರಾಜ್ಯ ಸರ್ಕಾರದ ನಿರ್ಲಕ್ಷಕ್ಕೆ ನಿದರ್ಶನವಾಗಿದೆ. ರಾಜ್ಯ ಸರ್ಕಾರಕ್ಕೆ ನೈತಿಕತೆ ಇದ್ದರೆ  ಕೂಡಲೇ ಮೃತ ಕುಟುಂಬಗಳಿಗೆ 10 ಲಕ್ಷದ ಬದಲಾಗಿ ಒಂದು ಕೋಟಿ ಪರಿಹಾರ ನೀಡಲಿ, ಮೃತರ ಕುಟುಂಬಗಳ ಸದಸ್ಯರಿಗೆ ಸರ್ಕಾರಿ ಕೆಲಸ ನೀಡಲಿ ಇಲ್ಲವೇ ನೈತಿಕ ಹೊಣೆ ಹೊತ್ತು  ರಾಜ್ಯದ ಮುಖ್ಯಮಂತ್ರಿಗಳು  ರಾಜೀನಾಮೆ ನೀಡಲಿ  ಎಂದರು.

 ಪ್ರಚಾರದ ಭರದಲ್ಲಿ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸುವುದನ್ನು  ಮರೆತಿದೆ  ಲಕ್ಷಾಂತರ ಅಭಿಮಾನಿಗಳನ್ನು  ನಿಭಾಯಿಸಲು  ಅವಶ್ಯಕವಿರುವ ಪೊಲೀಸ್ ಸಿಬ್ಬಂದಿ ನಿಯೋಜಿಸುವಲ್ಲಿ  ಸರ್ಕಾರ ವಿಫಲವಾಗಿದೆ ಎಂದರು.

ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಆಗಲಿ-
 ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿರುವ ಘಟನೆ ಸಂಬಂಧ ತನಿಖೆಯು ವಿಶೇಷ ತಂಡ ರಚನೆ ಮಾಡುವ ಮೂಲಕ  ಹೈಕೋರ್ಟ್ ನ್ಯಾಯಾಧೀಶರ ಮುಂದೆ ನಡೆಯಲಿ  ಕಾರ್ಯಕ್ರಮದ ಆಯೋಜನೆಗೂ ಮುನ್ನ  ರಾಜ್ಯ ಸರ್ಕಾರ ನಡೆಸಿರುವ ಪೂರ್ವಭಾವಿ ಸಭೆ, ಕಾರ್ಯಕ್ರಮದ ರೂಪರೇಷೆಗಳ ಪಟ್ಟಿ , ಕೈಗೊಂಡಿರುವ ಭದ್ರತೆಪೂರ್ವ ಸಿದ್ಧತಾ ತಯಾರಿ , ಪೋಲಿಸ್ ನಿಯೋಜನೆ ಕುರಿತಂತೆ  ಎಲ್ಲ ಪತ್ರ ವ್ಯವಹಾರಗಳನ್ನು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಸಲ್ಲಿಸಲಿ  ಎಂದು ಆಗ್ರಹಿಸಿದರು.

  ರಾಜ್ಯ ಬಿಜೆಪಿ ವಕ್ತಾರ ವೆಂಕಟೇಶ್ ದೊಡ್ಡೇರಿ ಮಾತನಾಡಿ  ಈ ಹಿಂದೆ ಕೇರಳದಲ್ಲಿ  ಆನೆ ತುಳಿತಕ್ಕೆ   ಒಳಗಾಗಿದ್ದ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದ  ರಾಜ್ಯ ಸರ್ಕಾರ ಇಂದು  ನಮ್ಮ ರಾಜ್ಯದ ಜನರ ಸಾವಿಗೆ ಕೇವಲ 10 ಲಕ್ಷ ಪರಿಹಾರ ಘೋಷಣೆ ಮಾಡಿರುವುದು  ವಿಪರ್ಯಾಸವೇ ಸರಿ..  ಪೂರ್ವಯೋಜನೆ ಇಲ್ಲದೆ ಕೇವಲ ತಮ್ಮ ಘನತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಆಯೋಜನೆಗೆ ಮುಂದಾಗಿದ್ದಾರೆ  ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಮೆರವಣಿಗೆಗೆ ಅವಕಾಶ ಕಲ್ಪಿಸಿದ್ದಾರೆ  ಈ ದುರಂತ ಸಂಭವಿಸುತ್ತಿರಲಿಲ್ಲ  ಸ್ಟೇಡಿಯಂ ಬಳಿ  ಲಕ್ಷಾಂತರ ಜನ ಸೇರುತ್ತಿರಲಿಲ್ಲ ಎಂದರು.

  ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಸ್ಥಳೀಯ ನಗರಸಭಾ ಸದಸ್ಯ ಬಂತಿ ವೆಂಕಟೇಶ್, ಜಿಲ್ಲಾ ವಕ್ತಾರೆ ಪುಷ್ಪ ಶಿವಶಂಕರ್, ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಮುದ್ದಪ್ಪ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

 

Share This Article
error: Content is protected !!
";