ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ದೇಶದ ಚೈತನ್ಯವೇ ನಮ್ಮ ಶ್ರೇಷ್ಠ ಸಂವಿಧಾನ! ಸಂವಿಧಾನ ದಿನದ ಈ ಶುಭ ಸಂದರ್ಭದಲ್ಲಿ, ಸಂವಿಧಾನ ಶಿಲ್ಪಿ ಭಾರತರತ್ನ ಡಾ ಬಿ.ಆರ್.ಅಂಬೇಡ್ಕರ್ ಅವರ ಸಂಸ್ಮರಣೆಗಳೊಂದಿಗೆ, ನಾಡಿನ ಸಮಸ್ತ ಜನತೆಗೆ ನನ್ನ ಶುಭಕಾಮನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಸಂವಿಧಾನ ರಚನಾ ಸಭೆಯು 1949 ರ ನವೆಂಬರ್ 26 ರಂದು ಅಂಗೀಕರಿಸಿದ್ದು, ಈ ಐತಿಹಾಸಿಕ ದಿನವನ್ನು ಸ್ಮರಣೀಯಗೊಳಿಸಲು, ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ರವರು 2015ರಲ್ಲಿ, ನವೆಂಬರ್ 26 ಅನ್ನು ‘ಸಂವಿಧಾನ ದಿನ‘ವನ್ನಾಗಿ ಆಚರಿಸುವ ತೀರ್ಮಾನ ತೆಗೆದುಕೊಂಡರು.
ನಮ್ಮ ಶ್ರೇಷ್ಠ ಸಂವಿಧಾನ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸದೃಢ ಸ್ತಂಭಗಳ ಮೇಲೆ ನಿಂತಿದೆ. ಸಂವಿಧಾನದ ಸದಾಶಯಗಳನ್ನು ಸದಾ ಎತ್ತಿಹಿಡಿಯುವ ಜೊತೆಗೆ, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ನಮ್ಮ ಸಂಕಲ್ಪವನ್ನು ಇಂದು ಪುನರುಚ್ಚರಿಸೋಣ. ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸೋಣ ಎಂದು ವಿಜಯೇಂದ್ರ ಹೇಳಿದರು.

