ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಳೆದ ಹಲವಾರುದಶಕಗಳಿಂದ ಮಹಿಳಾ ಸ್ವಸಹಾಯ ಗುಂಪುಗಳ ಸಬಲೀಕರಣ ಹಾಗೂ ಅವುಗಳ ಆರ್ಥಿಕ ಚೇತರಿಕೆಗೆ ಆದ್ಯತೆ ನೀಡುತ್ತಾ ಬಂದಿದ್ದು, ಸಾವಿರಾರು ಮಹಿಳಾ ಸಂಘಟನೆಯ ಲಕ್ಷಾಂತರ ಮಹಿಳೆಯರು ಇಂದು ಆರ್ಥಿಕವಾಗಿ ಶಕ್ತಿ ಮುನ್ನಡೆ ಸಾಧಿಸಿದ್ದಾರೆ. ಮಹಿಳೆಯರನ್ನು ಸದಾಕಾಲ ಉನ್ನತ್ತಮಟ್ಟದಲ್ಲಿ ಗೌರವಿಸುವ ಸಂಸ್ಥೆ ನಮ್ಮದಾಗಿದೆ ಎಂದು ಜ್ಞಾನವಿಕಾಸ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ರತ್ನಮ್ಮ ತಿಳಿಸಿದರು.
ಅವರು, ನಗರದ ವಿಶ್ವಕರ್ಮಕಲ್ಯಾಣಮಂಟಪದಲ್ಲಿ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ರಾಜ್ಯಪ್ರತಿಯೊಂದು ಜಿಲ್ಲೆಯಲ್ಲೂ ಜ್ಞಾನವಿಕಾಸ ಮಹಿಳಾವಿಭಾಗ ತನ್ನದೇಯಾದ ವಿಶೇಷ ಕಾರ್ಯಚಟುವಟಿಕೆಯಿಂದ ಮಹಿಳೆಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಈ ಸಂಘಟನೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲೂ ಸಹ ಮಹಿಳೆಯರನ್ನು ಶಕ್ತಿಶಾಲಿಯನ್ನಾಗಿ ಸದೃಢಗೊಳಿಸುವಲ್ಲಿ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಸದಸ್ಯ ಕವಿತಾಬೋರಯ್ಯ ಮಾತನಾಡಿ, ಚಳ್ಳಕೆರೆ ತಾಲ್ಲೂಕು ಸೇರಿದಂತೆ ಜಿಲ್ಲೆಯ ನಾನಾಭಾಗಗಳಲ್ಲಿ ಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಸಂಘಟನೆ ಅತ್ಯುತ್ತಮವಾಗಿದೆ. ಜ್ಞಾನವಿಕಾಸ ಯೋಜನೆಯಡಿ ಮಹಿಳೆಯರನ್ನು ಒಂದುಗೂಡಿಸಿ ಆರ್ಥಿಕ ಸಬಲತೆಯನ್ನು ನೀಡುವ ಕಾರ್ಯದಲ್ಲಿ ಈ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಇಂದು ತಾಲ್ಲೂಕಿನ ಬಹುತೇಕ ಮಹಿಳಾ ಸಂಘಟನೆ ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಶಶಿಕಲಾ, ಪ್ರಾಧ್ಯಾಪಕಿ ಕವಿತಾ ನಾಗೇಶ್, ಸಮನ್ವಯಾಧಿಕಾರಿ ಭವಾನಿ ಇಂದಿರಾ, ಲಕ್ಷ್ಮಿ, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.