ಆಶಾ ಕಾರ್ಯಕರ್ತೆಯರ ಮುಷ್ಕರ, ಕಣ್ಣು ಮುಚ್ಚಿ ಕೂತ ರಾಜ್ಯ ಕೇಂದ್ರ ಸರ್ಕಾರಗಳು

News Desk

ಆಶಾ ಕಾರ್ಯಕರ್ತೆಯರ ಮುಷ್ಕರ, ಕಣ್ಣು ಮುಚ್ಚಿ ಕೂತ ರಾಜ್ಯ ಕೇಂದ್ರ ಸರ್ಕಾರಗಳುಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಈ ಚುಮುಚುಮು ಚಳಿಯಲ್ಲಿ ಸ್ವಲ್ಪ ಹೆಚ್ಚೇ ಶೀತ ಗಾಳಿ ಬೀಸುತ್ತಿರುವಾಗ, ಆಶಾ ಕಾರ್ಯಕರ್ತೆಯರೆಂಬ ಹೆಣ್ಣು ಮಕ್ಕಳು ತಮ್ಮ ಅತ್ಯಂತ ನ್ಯಾಯಯುತ, ಮೂಲಭೂತ ಬೇಡಿಕೆಗಳಿಗಾಗಿ ಸರ್ಕಾರದ ವಿರುದ್ಧ ಪ್ರದರ್ಶನ, ಚಳವಳಿ, ಪ್ರತಿಭಟನೆ ಮಾಡುತ್ತಿರುವಾಗ ಸರ್ಕಾರ, ವಿರೋಧ ಪಕ್ಷಗಳು, ಸಮಾಜ, ಮಾಧ್ಯಮಗಳು ಅದಕ್ಕೆ ತೀವ್ರವಾಗಿ ಸ್ಪಂದಿಸದಿರುವುದು ನಿಜಕ್ಕೂ ವಿಷಾದನೀಯ…..

ಈ ಪಕ್ಷಗಳು ಯಾರ ಹಿತಕ್ಕಾಗಿ ಕೆಲಸ ಮಾಡುತ್ತಿವೆ, ಅವರು ಕೇಳುತ್ತಿರುವುದು ಕನಿಷ್ಠ ವೇತನ. ಒಬ್ಬ ವ್ಯಕ್ತಿ ಎಷ್ಟು ಸಮಯ ಕೆಲಸ ಮಾಡುತ್ತಾರೋ, ಏನು ಮಾಡುತ್ತಾರೋ ಅದು ಬೇರೆ ವಿಷಯ. ಆದರೆ ಸಾಮಾನ್ಯವಾಗಿ ಒಂದು ಕುಟುಂಬ ಸಹಜವಾಗಿ ಜೀವನ ಮಾಡಲು ಹತ್ತರಿಂದ ಹದಿನೈದು ಸಾವಿರ ಹಣ ಬೇಕಾಗುತ್ತದೆ. ಈಗ ಆಶಾ ಕಾರ್ಯಕರ್ತೆಯರನ್ನು ಅದಕ್ಕಿಂತ ಕಡಿಮೆ ಹಣಕ್ಕೆ ದುಡಿಸಿಕೊಂಡರೆ ಅವರು ಜೀವನ ಸಾಗಿಸುವುದಾದರೂ ಹೇಗೆ ?……

 ಈ ರಾಜಕೀಯ ಪಕ್ಷಗಳು ಡಿನ್ನರ್ ಪಾರ್ಟಿಯನ್ನು ಏರ್ಪಡಿಸುವುದೇ ಬಹುತೇಕ ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ. ಒಂದು ಡಿನ್ನರ್ ಊಟಕ್ಕೆ ಬಹುಶಃ ಎರಡು ಸಾವಿರಕ್ಕೂ ಹೆಚ್ಚು ಇರುತ್ತದೆ. ಒಂದು ಹೊತ್ತಿನ ಊಟಕ್ಕೇ ಅಷ್ಟು ಹಣ ಇರುವಾಗ ಅಂಗನವಾಡಿ ಕಾರ್ಯಕರ್ತರಿಗೆ ತುಂಬಾ ಕಡಿಮೆ ಹಣ ನೀಡಿ ಒಂದು ತಿಂಗಳು ನೀವು ಜೀವನ ಮಾಡಿ ಎನ್ನುವುದು ಯಾವ ನ್ಯಾಯ ?…..

ಸರ್ಕಾರದ ಬಹುದೊಡ್ಡ ಜವಾಬ್ದಾರಿ ಎಂದರೆ ಅದು ಆ ಪ್ರದೇಶದ ಸಂಪನ್ಮೂಲಗಳನ್ನು ಇಲ್ಲಿನ ಜನರಿಗೆ ಹೆಚ್ಚು ಕಡಿಮೆ ಸಮನಾಗಿ ಹಂಚುವುದು ಅಥವಾ ಕನಿಷ್ಠ ಎಲ್ಲ ಜನರ ಮೂಲಭೂತ ಸೌಕರ್ಯಗಳನ್ನು ನೋಡಿಕೊಳ್ಳುವುದು. ಅದು ಬಿಟ್ಟು ತಾವು ಮಾತ್ರ ಸುಖಭೋಗದ ಜೀವನ ಮಾಡುತ್ತಾ ಆ ಹೆಣ್ಣು ಮಕ್ಕಳನ್ನು ನಮ್ಮದೇ ಸಹಪಾಠಿಗಳನ್ನು ಆ ಗಡಗಡ ನಡುಗುವ ಚಳಿಯಲ್ಲಿ ನರಳುವಂತೆ ಮಾಡುವುದು ಎಷ್ಟೊಂದು ಘೋರ ಅನ್ಯಾಯವಲ್ಲವೇ ? ಅದರಲ್ಲೂ ಈ ಬಾರಿ ಬೆಂಗಳೂರಿನ ತಾಪಮಾನ ತೀವ್ರವಾಗಿ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಅಲ್ಲಿ ಬಿಟ್ಟು ನಾವುಗಳು ಮತ್ತೇನೋ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಅವರ ಬೇಡಿಕೆಗಳನ್ನು ಕೂಡಲೇ ಕರೆಸಿ ಮಾತನಾಡಿ ಸಾಧ್ಯವಿರುವ ಪರಿಹಾರವನ್ನು ಕಂಡುಹಿಡಿಯಬೇಕು…

ಹೆಣ್ಣುಮಕ್ಕಳು ಅಥವಾ ಆಶಾ ಕಾರ್ಯಕರ್ತೆಯರು ಎಂದ ಮಾತ್ರಕ್ಕೆ ಅವರು ಕೇಳುವ ಬೇಡಿಕೆಗಳಲ್ಲಿ ನ್ಯಾಯ ಇಲ್ಲದಿದ್ದರೆ ಸ್ಪಷ್ಟವಾಗಿ ತಿರಸ್ಕರಿಸಬಹುದು. ಆದರೆ ಪತ್ರಿಕೆಯಲ್ಲಿ ನಾನು ಗಮನಿಸಿದಂತೆ ಅವರ ಬೇಡಿಕೆಗಳು ನ್ಯಾಯಯುತವಾಗಿದೆ. ತುಂಬಾ ದುಬಾರಿಯೂ ಅಲ್ಲ. ನಮ್ಮದೇ ಹೆಣ್ಣು ಮಕ್ಕಳು ಒಂದಷ್ಟು ಆರ್ಥಿಕ ಭದ್ರತೆ, ಸ್ವಾವಲಂಬನೆ ಸಾಧಿಸಲಿ…..

ಇದನ್ನು ಹೇಳುವಾಗ ಈ ರಾಜ್ಯದ ಒಟ್ಟು ಸಂಪನ್ಮೂಲಗಳ ಲಭ್ಯತೆ ನನ್ನ ಗಮನದಲ್ಲಿದೆ. ಖಂಡಿತವಾಗಲೂ ರಾಜ್ಯ ಸರ್ಕಾರ ನ್ಯಾಯಯುತವಾಗಿ ವರ್ತಿಸಿದರೆ ಈ ಬೇಡಿಕೆಗಳನ್ನು ಪೂರೈಸುವುದು ಕಷ್ಟವೇನಲ್ಲ. ಏಕೆಂದರೆ ಸರ್ಕಾರದಲ್ಲಿ ಶೇಕಡಾ 25% ಗೂ ಹೆಚ್ಚು ಹಣ ಅನಾವಶ್ಯಕವಾಗಿ ಖರ್ಚಾಗುತ್ತದೆ.  ಭ್ರಷ್ಟಾಚಾರವನ್ನು ಹೊರತುಪಡಿಸಿಯು ಇಷ್ಟು ಹಣ ಬಹುತೇಕ ದುಂದು ವೆಚ್ಚವೇ ಆಗುತ್ತಿದೆ. ಜೊತೆಗೆ ರಾಜ್ಯದ ಯಾವುದೇ ಶಾಸಕರು, ಸಂಸದರು, ಮಂತ್ರಿಗಳ ಜೀವನ ಶೈಲಿಯನ್ನು ಗಮನಿಸಿದಾಗ ಈ ಆಶಾ ಕಾರ್ಯಕರ್ತೆಯರಿಗಿಂತ ನೂರು ಪಟ್ಟು ಹೆಚ್ಚು ಆರ್ಥಿಕ ಸದೃಢತೆಯನ್ನು ಹೊಂದಿದ್ದಾರೆ. ಆ ದೃಷ್ಟಿಯಲ್ಲಿ ಇಡೀ ದೇಶದಲ್ಲಿಯೇ ರಾಜ್ಯದ ಶಾಸಕರ ಸರಾಸರಿ ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮ ಏರು ಗತಿಯಲ್ಲಿದೆ. ಕೇಂದ್ರ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಕರ್ನಾಟಕ ನೀಡುವ ಹಣ ರಾಷ್ಟ್ರದಲ್ಲೇ ಎರಡನೆಯ ಸ್ಥಾನದಲ್ಲಿದೆ….

ಇಷ್ಟೆಲ್ಲಾ ಸಂಪನ್ಮೂಲಗಳಿರುವಾಗ ಆಶಾ ಕಾರ್ಯಕರ್ತೆಯರಿಗೆ ಸ್ವಲ್ಪ ಹೆಚ್ಚಿನ ಮೊತ್ತವನ್ನು ಕೊಡುವುದು ಕಷ್ಟವೇನು ಅಲ್ಲ. ಸರ್ಕಾರ ಮಾಡಬೇಕಾಗಿರುವುದು ಒಟ್ಟು ವೆಚ್ಚವನ್ನು ಕಡಿಮೆ ಮಾಡುವುದು, ಆಶಾ ಕಾರ್ಯಕರ್ತೆಯರು ಸೇರಿ ಎಲ್ಲಾ ಸರ್ಕಾರಿ ನೌಕರರನ್ನು ಸಾಧ್ಯವಾದಷ್ಟು ಪ್ರಾಮಾಣಿಕವಾಗಿ, ದಕ್ಷವಾಗಿ ದುಡಿಸಿಕೊಳ್ಳುವುದು…….

ಆಶಾ ಕಾರ್ಯಕರ್ತರ ಪ್ರತಿಭಟನೆ ಕೇವಲ ರಾಜ್ಯ ಸರ್ಕಾರಕ್ಕೆ ಮಾತ್ರ ಸೀಮಿತವಲ್ಲ ಇದರಲ್ಲಿ ಕೇಂದ್ರ ಸರ್ಕಾರದ ಪಾಲು ಇದೆ. ಅವರು ಸಹ ಆಶಾ ಕಾರ್ಯಕರ್ತರಿಗೆ ಹೆಚ್ಚಿನ ಪ್ರಮಾಣದ ಹಣವನ್ನು ಬಿಡುಗಡೆ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರವು ಸಹ ಅನಾವಶ್ಯಕವಾಗಿ ಯಾವುದೋ ಯೋಜನೆಗಳಿಗೆ ಹಣವಿನಿಯೋಗಿಸುವುದಕ್ಕಿಂತ ಈ ರೀತಿ ನಮ್ಮದೇ ದೇಶದ ಹೆಣ್ಣು ಮಕ್ಕಳಿಗೆ ಸ್ವಾವಲಂಬನೆ ಕಟ್ಟಿಕೊಳ್ಳಲು ಹೆಚ್ಚು ಪ್ರೋತ್ಸಾಹ ಕೊಡಬೇಕಾಗಿರುವುದು ಅದರ ಕರ್ತವ್ಯವಾಗಿದೆ…..

ನಮಗೆ ಬಂದ ಮಾಹಿತಿಯಂತೆ ಆಶಾ ಕಾರ್ಯಕರ್ತೆಯರಿಗೆ ಕರ್ನಾಟಕ ರಾಜ್ಯದಲ್ಲಿ ಮಾಸಿಕ 8000 ರೂಪಾಯಿಗಳನ್ನು ನೀಡಲಾಗುತ್ತಿದೆ. ಸುಮಾರು 40,000 ಆಶಾ ಕಾರ್ಯಕರ್ತೆಯರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬೇಡಿಕೆ ಮಾಸಿಕ 15 ಸಾವಿರ ರೂಗಳನ್ನು ನೀಡಬೇಕೆಂಬುದು….

ಇತರೆ ರಾಜ್ಯಗಳಲ್ಲಿ ಇವರ ಮಾಸಿಕ ವೇತನ ಇದಕ್ಕಿಂತ ಕಡಿಮೆ ಇದೆ. ತಮಿಳುನಾಡಿನಲ್ಲಿ ಕೇವಲ ಒಂದು ಸಾವಿರ ನೀಡಲಾಗುತ್ತಿದೆಯಂತೆ. ಇವರು ಮಾಡುವ ಕೆಲಸ ಮತ್ತು ಸಮಯಕ್ಕೆ ಈಗ ನೀಡುತ್ತಿರುವ ಹಣವೇ ಹೆಚ್ಚು ಎಂದು ಸರ್ಕಾರದ ಮೂಲಗಳು ಹೇಳುತ್ತವೆ….

ಆದರೆ ಮೊದಲೇ ಹೇಳಿದಂತೆ ಎಷ್ಟು ಸಮಯ ಮತ್ತು ಎಷ್ಟು ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಲ್ಲ. ಒಬ್ಬ ಆಶಾ ಕಾರ್ಯಕರ್ತೆಗೆ ಕುಟುಂಬ ನಿರ್ವಹಣೆಗೆ ಕನಿಷ್ಠವೆಂದರು 10,000 ಹಣ ಬೇಕಾಗುತ್ತದೆ. ಅವರನ್ನು ಕೆಲವೇ ಗಂಟೆಗಳು ದುಡಿಸಿಕೊಂಡರು ಉಳಿದ ಸಮಯದಲ್ಲಿ ಬೇರೆ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಗಂಟೆಗಳ ಲೆಕ್ಕದಲ್ಲಿ ಆ ರೀತಿ ದುಡಿಸಿಕೊಳ್ಳುವುದು ಒಳ್ಳೆಯದೂ ಅಲ್ಲ. ಕೊಟ್ಟರೆ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಬಳ ಮತ್ತು ಕೆಲಸ ಕೊಡಬೇಕು….

ಈಗಿನ ಕಾಲದಲ್ಲಿ 3:00/4:00 ಗಂಟೆಗಳ ಕೆಲಸ ಕೊಟ್ಟರು ಇಡೀ ದಿನ ಕೆಲಸ ಮಾಡಿದಂತೆ ಆಗುತ್ತದೆ. ಅದಕ್ಕೆ ಬದಲಾಗಿ ಆಶಾ ಕಾರ್ಯಕರ್ತೆಯರನ್ನು ಇತರೆ ಇನ್ನಷ್ಟು ಸರ್ಕಾರದ ಅವಶ್ಯಕವಾದ ಕೆಲಸಗಳಿಗೂ ಉಪಯೋಗಿಸಿಕೊಳ್ಳಬಹುದು. ಏನೇ ಆಗಲಿ ಸರ್ಕಾರ ಕೂಡಲೇ ಅವರ ಬೇಡಿಕೆಗಳನ್ನು ಪರಿಶೀಲಿಸಿ ಒಂದು ತೀರ್ಮಾನ ಕೈಗೊಳ್ಳಬೇಕು. ಅವರನ್ನು ಇನ್ನೂ ಅಲ್ಲಿ ಪ್ರತಿಭಟನೆ ಮುಂದುವರಿಸಲು ಅವಕಾಶ ಕೊಡಬಾರದು. ಈ ಚಳಿಯಲ್ಲಿ ಏನಾದರೂ ಅನಾಹುತವಾದರೆ ತುಂಬಾ ಕಷ್ಟ….. ಎಲ್ಲರಿಗೂ ಒಳ್ಳೆಯದಾಗಲಿ…..
ಲೇಖನ-ವಿವೇಕಾನಂದ. ಎಚ್. ಕೆ. 9844013068……..

- Advertisement -  - Advertisement - 
Share This Article
error: Content is protected !!
";