ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರಂಟಿಗಳು ಒಂದು ರಾಜ್ಯವನ್ನು ಹೇಗೆ ಬಲಿ ಪಡೆಯುತ್ತಿವೆ ಎನ್ನುವುದಕ್ಕೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಬಿಜೆಪಿ ದೂರಿದೆ.
ಕರ್ನಾಟಕದಲ್ಲಂತೂ ರಾಜ್ಯವೇ ದಿವಾಳಿ ಅಂಚಿನಲ್ಲಿದೆ. ಸ್ವತಃ ಕರ್ನಾಟಕದ ಕಾಂಗ್ರೆಸ್ ಸಚಿವರು, ಶಾಸಕರೇ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.
ಇಷ್ಟೆಲ್ಲಾ ಅಪಸ್ವರದ ನಡುವೆಯೂ “ದಿವಾಳಿ ಮಾಡೆಲ್”ರಾಯಭಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ದೆಹಲಿ ಚುನಾವಣೆಗಾಗಿ ಪ್ಯಾರಿ ದೀದಿ ಎಂಬ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ನೆಟ್ಟಗೆ ಜಾರಿಯಾಗಿಲ್ಲ, ಇನ್ನು ದೆಹಲಿಯಂತಹ ಸಣ್ಣ ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಮಕಾಡೆ ಮಲಗುವುದರಲ್ಲಿ ಸಂಶಯವಿಲ್ಲ ಎಂದು ಬಿಜೆಪಿ ಭವಿಷ್ಯ ನುಡಿದಿದೆ.
ಮಾನ್ಯ ಡಿಕೆಶಿಯವರೇ, ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ, ನೀವು ನೋಡಿದರೆ ನುಡಿದಂತೆ ನಡೆದಿದ್ದೇವೆ ಎಂದು ದೆಹಲಿಯಲ್ಲೂ ಬುರುಡೆ ಬಿಡುತ್ತಿದ್ದೀರಿ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.