ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಜನಾಕ್ರಂದನ ಆಲಿಸದ ಸರ್ಕಾರದ ನಡೆ ಬದ್ಧತೆಯಿಲ್ಲದ ನಿರ್ದಯತೆಯನ್ನು ಪ್ರತಿಬಿಂಬಿಸುತ್ತಿದೆ ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಹೊನಗುಂಟದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೆರೆ ನಿರಾಶ್ರಿತರ ಹಾಗೂ ನೊಂದ ರೈತರ ಕಷ್ಟ ಆಲಿಸಲಾಯಿತು. ಮನೆಗಳಿಗೆ ನೀರು ನುಗ್ಗಿದೆ, ಕೆಲವೇ ದಿನಗಳಲ್ಲಿ ರೈತರ ಮಡಿಲು ಸೇರಬೇಕಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ, ಸಚಿವರೊಬ್ಬರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೂ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ತಾಯಂದಿರ ದೂರು- ದುಮ್ಮಾನಗಳು ನಿಜಕ್ಕೂ ಅಭಿವೃದ್ಧಿ ಶೂನ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಈ ಮಟ್ಟಿನ ದುಸ್ಥಿತಿ ಇರುವುದು ಮೂಲಸೌಕರ್ಯ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗುತ್ತಿರುವುದು ದುರ್ದೈವದ ಸಂಗತಿ ಎಂದು ಅವರು ವಾಗ್ದಾಳಿ ಮಾಡಿದರು.
ರೈತರು ಹಾಗೂ ಸಂಕಷ್ಟಿತ ತಾಯಂದಿರ ಕಷ್ಟ ಆಲಿಸದೇ, ಕುಂಭಕರ್ಣ ನಿದ್ದೆಯಲ್ಲಿರುವ ರಾಜ್ಯ ಸರ್ಕಾರ ಈಗಲಾದಲೂ ಕಷ್ಟದಲ್ಲಿರುವ ಜನರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಧಾವಿಸದಿದ್ದರೆ ಈ ನಾಡಿನ ಜನ ಎಂದಿಗೂ ಕ್ಷಮಿಸಲಾರರು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಬಸವರಾಜ್ ಮುತ್ತಿಮಡು, ಮಾಜಿ ಸಂಸದ ಡಾ.ಉಮೇಶ್ ಜಾಧವ್, ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ ಸೇರಿದಂತೆ ಪಕ್ಷದ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

