ಚಂದ್ರವಳ್ಳಿ ನ್ಯೂಸ್, ನವದೆಹಲಿ:
ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳನ್ನು ಒಪ್ಪಿಗೆ ನೀಡಲು ಸಮಯ ನಿಗದಿಪಡಿಸಲು ಸಾಧ್ಯವಿಲ್ಲ. ಸಕಾರಣಗಳಿಲ್ಲದೇ ಮಸೂದೆಗಳನ್ನು ತಡೆ ಹಿಡಿದಲ್ಲಿ ಅದು ನ್ಯಾಯಾಲಯಗಳ ಪರಿಶೀಲನೆಗೆ ಒಳಪಡಿಸಬಹುದು ಎಂದು ಸುಪ್ರೀಂಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್, ವಿಕ್ರಮ್ ನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್ ಚಂದೂರ್ಕರ್ ಅವರಿದ್ದ ಪಂಚಪೀಠವು, ರಾಷ್ಟ್ರಪತಿಗಳ ಪ್ರಶ್ನೆಯನ್ನು ಉಲ್ಲೇಖಿಸಿ ಈ ಅಭಿಪ್ರಾಯ ನೀಡಿತು.
ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ಸಾಂವಿಧಾನಿಕ ನ್ಯಾಯಾಲಯವು ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸಮಯದ ಮಿತಿ ಹೇರಬಹುದೇ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಳಿದ್ದರು. ಈ ಕುರಿತು ವಾದ ಆಲಿಸಿದ ಸುಪ್ರೀಂ ಕೋರ್ಟ್ ಈ ಮೇಲಿನ ಅಭಿಪ್ರಾಯ ಮಂಡಿಸಿ ಆದೇಶಿಸಿದೆ.
ಐವರು ನ್ಯಾಯಮೂರ್ತಿಗಳಿದ್ದ ಪಂಚ ಪೀಠವು ತಮಿಳುನಾಡು ಪ್ರಕರಣವನ್ನು ಉಲ್ಲೇಖಿಸಿ, ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ಮಸೂದೆಗಳಿಗೆ ಅಂಕಿತ ಹಾಕದೇ ಉಳಿಸಿಕೊಂಡಲ್ಲಿ ಅವನ್ನು ಸರ್ಕಾರ ಬಹುಮತದ ಆಧಾರದ ಮೇಲೆ ಜಾರಿ ಮಾಡಲು ಸಾಧ್ಯವಿಲ್ಲ. ಅಂತಹ ಡೀಮ್ಡ್ ಅಸೆಂಟ್ ಪದ್ಧತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಯಾವುದೇ ಮಸೂದೆಗೆ ರಾಜ್ಯಪಾಲರ ಹಾಗೂ ರಾಷ್ಟ್ರಪತಿಗಳ ಅಂಕಿತ ಕಡ್ಡಾಯ. ರಾಜ್ಯ ಸರ್ಕಾರವೇ ನೇರವಾಗಿ ಕೆಲ ತಿದ್ದುಪಡಿಗಳೊಂದಿಗೆ ಮಸೂದೆಯನ್ನು ಕಾನೂನನ್ನಾಗಿ ಜಾರಿಗೆ ಮಾಡಲು ಅವಕಾಶವಿಲ್ಲ. ಇದು ಏಕಪಕ್ಷೀಯ ನಿರ್ಧಾರಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಸಂವಿಧಾನದ 200 ಮತ್ತು 201 ನೇ ವಿಧಿಗಳ ಉಲ್ಲಂಘಟನೆಯೂ ಹೌದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮುಂದಿರುವ ಆಯ್ಕೆಗಳೇನು?:
ರಾಜ್ಯ ಶಾಸಕಾಂಗಗಳು ಯಾವುದೇ ಮಸೂದೆ ಅಂಗೀಕರಿಸಿ ಒಪ್ಪಿಗೆಗೆ ರಾಜ್ಯಪಾಲರ ಬಳಿಗೆ ಬಂದಾಗ ಅದನ್ನು ಅವರು ಒಪ್ಪುವ, ರಾಷ್ಟ್ರಪತಿಗಳಿಗೆ ಕಳುಹಿಸುವ ಹಾಗೂ ಕೆಲ ತಿದ್ದುಪಡಿ ಸೂಚಿಸಿ ವಾಪಸ್ ಕಳುಹಿಸುವ ಅವಕಾಶ ಹೊಂದಿರುತ್ತಾರೆ.
ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರು ಮಸೂದೆಯನ್ನು ಸಕಾರಣವಿಲ್ಲದೇ, ತಡೆಹಿಡಿದರೆ ಅದು ಒಕ್ಕೂಟ ವ್ಯವಸ್ಥೆಯ ತತ್ವಕ್ಕೆ ವಿರುದ್ಧ ಮತ್ತು ರಾಜ್ಯ ಶಾಸಕಾಂಗಗಳ ಅಧಿಕಾರವನ್ನು ಕಸಿದುಕೊಂಡಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇದೇ ವೇಳೆ ತಿಳಿಸಿದೆ.
ಹೀಗಾಗಿ, ರಾಜ್ಯಪಾಲರು ತಮ್ಮ ಮುಂದಿರುವ ಮೂರು ಸಾಂವಿಧಾನಿಕ ಆಯ್ಕೆಗಳಾದ ಮಸೂದೆಗೆ ಒಪ್ಪಿಗೆ ನೀಡುವುದು, ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ, ಶಾಸಕಾಂಗಕ್ಕೆ ವಾಪಸ್ ಕಳುಹಿಸುವುದನ್ನು ತಮ್ಮ ವಿವೇಚನೆಯಾನುಸಾರ ಮಾಡಬೇಕು. ಇಲ್ಲಿ ಅವರಿಗೆ ನಾಲ್ಕನೇ ಆಯ್ಕೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಪಂಚಪೀಠವು ಅಭಿಪ್ರಾಯಪಟ್ಟಿತು.
ದ್ವಿಸದಸ್ಯ ಪೀಠ:
ತಮಿಳುನಾಡು ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ದ್ವಿಸದಸ್ಯ ಪೀಠವು, ರಾಜ್ಯಪಾಲರು ಯಾವುದೇ ಮಸೂದೆಯನ್ನು ಮೂರು ತಿಂಗಳ ಒಳಗೆ ಒಪ್ಪುವ, ನಿರಾಕರಿಸುವ ಅವಕಾಶವಿದೆ. ರಾಜ್ಯ ಶಾಸಕಾಂಗವು ಅದೇ ಮಸೂದೆಯನ್ನು ತಿದ್ದುಪಡಿಗಳೊಂದಿಗೆ ಮರು ಒಪ್ಪಿಗೆಗೆ ಕಳುಹಿಸಿದಲ್ಲಿ ಒಂದು ತಿಂಗಳೊಳಗೆ ರಾಜ್ಯಪಾಲರು ನಿರ್ಧರಿಸಬೇಕು ಎಂದು ತೀರ್ಪು ನೀಡಿ ಆದೇಶಿಸಿತ್ತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ತೀರ್ಪು ಆಧರಿಸಿ, ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಮೇಲೆ ಕಾಲಮಿತಿಗಳನ್ನು ವಿಧಿಸಬಹುದೇ ಎಂದು ಸುಪ್ರೀಂ ಕೋರ್ಟ್ ನಲ್ಲಿ ಕೇಳಿದ್ದರು.

