ಚಂದ್ರವಳ್ಳಿ ನ್ಯೂಸ್, ನವದೆಹಲಿ:
ತಮಿಳುನಾಡು ಮತ್ತು ಕರ್ನಾಟಕದ ನಡುವಿನ ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಲು ಅಂತರ್ರಾಜ್ಯ ಜಲ ವಿವಾದ ನ್ಯಾಯಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿತು.
ತಮಿಳುನಾಡಿನಲ್ಲಿ ಪೆನ್ನೈಯಾರ್ ಎಂದು ಕರೆಯುವ ನದಿ ನೀರು ವಿವಾದವನ್ನು ಇತ್ಯರ್ಥಪಡಿಸಬೇಕು ಎಂದು ಕೋರಿ ಅಲ್ಲಿನ ಸರ್ಕಾರ 2018ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇದರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು 2025ರ ಡಿಸೆಂಬರ್ 19ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದು ಸೋಮವಾರ ಅದರ ಆದೇಶವನ್ನು ಸುಪ್ರೀಂ ಪ್ರಕಟಿಸಿತು.
ನ್ಯಾಯ ಮಂಡಳಿ ರಚನೆಗೆ ಆದೇಶ:
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಒಂದು ತಿಂಗಳೊಳಗೆ ಅಂತಾರಾಜ್ಯ ನದಿ ನೀರು ವಿವಾದ ನ್ಯಾಯ ಮಂಡಳಿಯನ್ನು ರಚಿಸುವಂತೆ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು ನಿರ್ದೇಶಿಸಿತು.
ನದಿ ನೀರು ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಎರಡೂ ರಾಜ್ಯಗಳು ಯಾವುದೇ ಒಮ್ಮತಕ್ಕೆ ಬರುತ್ತಿಲ್ಲ ಎಂದು ಕೇಂದ್ರ ಸರ್ಕಾರವು 2025ರ ಡಿಸೆಂಬರ್ನಲ್ಲಿ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿತ್ತು.
ಆಕ್ಷೇಪ ಏನು?:
ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ ಸೇರುವ ದಕ್ಷಿಣ ಪಿನಾಕಿನಿ ಎಂದು ಕರೆಯುವ ಪೆನ್ನೈಯಾರ್ ನದಿಯ ಉಪನದಿ ಮಾರ್ಕೆಂಡೇಯ ನದಿಗೆ ಅಡ್ಡಲಾಗಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಅಣೆಕಟ್ಟುಗಳು ಮತ್ತು ನೀರು ತಿರುಗಿಸುವ ಯೋಜನೆಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇದು ತನ್ನ ರಾಜ್ಯದ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಯೋಜನೆಗಳನ್ನು ನಿಲ್ಲಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ 2018 ರಲ್ಲಿ ಕೋರಿತ್ತು.
ಕರ್ನಾಟಕದ ವಾದ ಏನು?:
ಈ ವಾದವನ್ನು ವಿರೋಧಿಸಿದ ಕರ್ನಾಟಕ, ನದಿಯ ಒಟ್ಟು 11.77 ಟಿಎಂಸಿ ನೀರಿನಲ್ಲಿ, 9.77 ಟಿಎಂಸಿಯನ್ನು ಮಾತ್ರ ಬಳಸುವ ಯೋಜನೆ ಇದಾಗಿದೆ. ಇದರಲ್ಲಿ 2 ಟಿಎಂಸಿ ಅಥವಾ ಅದಕ್ಕೂ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದು ತಮಿಳುನಾಡಿನ ಜನರ ಅವಶ್ಯಕತೆ ಪೂರೈಸಲು ಸಾಕಾಗುತ್ತದೆ ಎಂದು ಎಂದು ವಾದಿಸಿತ್ತು.
ಕೇಂದ್ರ ಸರ್ಕಾರವು 2025ರ ಮಾರ್ಚ್ನಲ್ಲಿ ವಿವಾದದ ಕುರಿತು ಎರಡು ರಾಜ್ಯಗಳ ನಡುವೆ ಸಭೆ ಕರೆಯಿತು. ಆದರೆ, ಇದರಲ್ಲಿ ಭಾಗಿಯಾಗಲು ತಮಿಳುನಾಡು ನಿರಾಕರಿಸಿ, ನ್ಯಾಯಮಂಡಳಿ ರಚನೆಗೆ ಪಟ್ಟು ಹಿಡಿಯಿತು. ಅದರಂತೆ, ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು.

