ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಶಾಸಕರ ನಿಯೋಗದೊಂದಿಗೆ ಸೋಮವಾರ ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ ವಿಧಾನಸಭಾ ಸಭಾಧ್ಯಕ್ಷರು ಇತ್ತೀಚೆಗೆ ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿರುವ ವಿಷಯದಲ್ಲಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಲಾಗಿದ್ದು, ಈ ಕುರಿತು ಗೌರವಾನ್ವಿತ ರಾಜ್ಯಪಾಲರು ಮಧ್ಯಪ್ರದೇಶಿಸಬೇಕೆಂದು ಮನವಿ ಮಾಡಲಾಯಿತು.
ಈಚೆಗೆ ನಡೆದ ಸದನದ ಕಲಾಪದಲ್ಲಿ ಬಿಜೆಪಿಯ 18 ಶಾಸಕರ ಅಮಾನತು ವಾಪಸ್ ಪಡೆಯುವಂತೆ ಹಲವಾರು ಬಾರಿ ವಿಪಕ್ಷದ ನಾಯಕರು ಮತ್ತು ಶಾಸಕರು ಸಭಾಧ್ಯಕ್ಷರನ್ನು ಭೇಟಿ ಮಾಡಿ ಮನವಿ ಮಾಡಿದರೂ ಶಾಸಕರ ಅಮಾನತನ್ನು ಹಿಂಪಡೆದಿಲ್ಲ. ಸ್ಪೀಕರ್ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು, 18 ಶಾಸಕರ ಅಮಾನತು ತಮ್ಮೊಬ್ಬರ ತೀರ್ಮಾನ ಅಲ್ಲ ಎಂದಿದ್ದಾರೆ ಇದು ಪ್ರಜಾಪ್ರಭುತ್ವ ವಿರೋಧಿ ನಿಲುವಾಗಿದ್ದು ಮಾನ್ಯ ರಾಜ್ಯಪಾಲರು ಮಧ್ಯಪ್ರವೇಶಿಸಿ ನಮ್ಮ ಶಾಸಕರಿಗೆ ನ್ಯಾಯ ಕೊಡಿಸಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ್, ಮಾಜಿ ಸಚಿವರಾದ ಕೆ.ಗೋಪಾಲಯ್ಯ, ಶಾಸಕರಾದ ರವಿ ಸುಬ್ರಹ್ಮಣ್ಯ, ಎಸ್.ರಘು, ಎಸ್.ಮುನಿರಾಜು, ಉದಯ್ ಗರುಡಾಚಾರ್, ಸಿ.ಕೆ.ರಾಮಮೂರ್ತಿ ಅವರುಗಳು ಉಪಸ್ಥಿತರಿದ್ದರು.