ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಗೇಟ್ ಕುಸಿದು ಬಿದ್ದ ಪರಿಣಾಮ ಬಾಲಕನೋರ್ವನ ಕಾಲು ಮುರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಾಕಳಿಯಲ್ಲಿ ಜರುಗಿದೆ.
ಮುಜರಾಯಿ ಇಲಾಖೆಯ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಕಳಿ ದೇವಸ್ಥಾನದ ಗೇಟ್ ಬಳಿ ಆಟವಾಡುತ್ತಿದ್ದ ಬಾಲಕ ಲೋಹಿತ್ ನಾಯಕ್ ಮೇಲೆ ದೇವಸ್ಥಾನದ ಪ್ರವೇಶದ್ವಾರದ ಗೇಟ್ ಅನಿರೀಕ್ಷಿತವಾಗಿ ಕುಸಿದು ಬಿದ್ದು ಬಾಲಕನ ಕಾಲು ಮುರಿದಿದೆ. ಬಾಲಕ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೇವಸ್ಥಾನದ ಗೇಟ್ ಕುಸಿದು ಬಿದ್ದಿರುವುದಕ್ಕೆ ಮುಖ್ಯ ಕಾರಣ ಗೇಟ್ ಸಂಪೂರ್ಣವಾಗಿ ತುಕ್ಕು ಹಿಡಿದಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಸ್ಥಿತಿಯಲ್ಲಿತ್ತು. ಸಂಬಂಧಪಟ್ಟ ಅಧಿಕಾರಿಗಳು ಅಥವಾ ಮುಜರಾಯಿ ಇಲಾಖೆ ಇದರ ಸುರಕ್ಷತೆ ಪರಿಶೀಲಿಸುವ ಗೋಜಿಗೆ ಹೋಗಿಲ್ಲ.
ಈ ನಿರ್ಲಕ್ಷ್ಯದ ಪರಿಣಾಮವಾಗಿ ಮುಗ್ಧ ಬಾಲಕ ಗಂಭೀರ ಗಾಯವಾಗಿದ್ದು ಕಾಲು ಮುರಿದಿದೆ, ಇಲಾಖೆಯ ಕಾರ್ಯವೈಖರಿ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

