ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರನೇ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಿನಿ ಪ್ರಾಜೆಕ್ಟ್‌ಗಳ ಪ್ರದರ್ಶನ ಟೆಕ್ನೋವಿಷನ್ ಮಿನಿ ಪ್ರಾಜೆಕ್ಟ್ ಎಕ್ಸ್‌ಪೋ-೨0೨೪ನ್ನು ಸೋಮವಾರ ಆಯೋಜಿಸಲಾಗಿತ್ತು.
ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಭರತ್ ಪಿ ಬಿ, ವಿದ್ಯಾರ್ಥಿಗಳಲ್ಲಿರುವ ತಾಂತ್ರಿಕ ಕೌಶಲ್ಯತೆ ಹೊರತರಲು ವಿದ್ಯಾರ್ಥಿಗಳೇ ಸ್ವತಃ ಮಿನಿ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸುವ ಯೋಜನೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ೨೩ ಉಪಯೋಗಿಕ ಮಿನಿ ಪ್ರಾಜೆಕ್ಟ್ ಸಿದ್ಧ ಪಡಿಸಿದ್ದಾರೆ.
ಸಮಾಜಕ್ಕೆ, ರೋಗಿಗಳಿಗೆ, ರೈತರಿಗೆ, ಮಹಿಳೆಯರ ರಕ್ಷಣೆಗೆ ಅನುಕೂಲವಾಗುವಂತಹ ಪ್ರಾಜೆಕ್ಟಗಳನ್ನು ಸಿದ್ಧಪಡಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳ ಆಲೋಚನೆ ಪ್ರಬುದ್ಧತೆಯಿಂದ ಕೂಡಿದೆ. ಇದಕ್ಕೆ ಅನುಗುಣವಾಗಿ ವಿಭಾಗ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಸಹ ವಿದ್ಯಾರ್ಥಿಗಳಿಗೆ ಸಮಾಜಮುಖಿ ಪ್ರಾಜೆಕ್ಟ್‌ಗಳನ್ನು ಸಿದ್ಧಪಡಿಸಲು ಪ್ರೋತ್ಸಾಹ ನೀಡಿದ್ದಾರೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ. ಬಿ.ಎಂ.ಹಾಲಸ್ವಾಮಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಸಿದ್ಧೇಶ್ ಕೆ ಬಿ, ಕಾರ್ಯಕ್ರಮ ಸಂಚಾಲಕರುಗಳಾದ ಪ್ರೊ.ರಘು ಎಸ್, ಪ್ರೊ.ಸುದರ್ಶನ್ ಎಂ.ಕೆ., ಹಾಗೂ ಉಪನ್ಯಾಸಕ ವರ್ಗದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವಿವಿಧ ಪಾಲಿಟೆಕ್ನಿಕ್, ಕಾಲೇಜುಗಳ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಆಗಮಿಸಿ ಪ್ರಾಜೆಕ್ಟ್‌ಗಳನ್ನು ವೀಕ್ಷಿಸಿ ಉಪಯುಕ್ತ ಮಾಹಿತಿ ಪಡೆದುಕೊಂಡರು.