ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಬೆದರಿಕೆ ಆರೋಪದ ವಿರುದ್ಧ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ ಸಂಪರ್ಕಿಸುವಂತೆ ಕರ್ನಾಟಕ ಥಿಯೇಟರ್ ಅಸೋಸಿಯೇಷನ್ ಗೆ ಸೂಚಿಸಿತು.
ಅರ್ಜಿದಾರರ ಪರ ಹಾಜರಾದ ವಕೀಲರು, ಕರ್ನಾಟಕದಲ್ಲಿ ಥಗ್ ಲೈಪ್ ಬಿಡುಗಡೆಯಾದರೆ ಥಿಯೇಟರ್ ಗೆ ಬೆಂಕಿ ಹಚ್ಚಲಾಗುವುದು ಎಂದು ಕೆಲವು ಗುಂಪುಗಳು ಬೆದರಿಕೆಯೊಡ್ಡುತ್ತಿವೆ ಎಂದು ಆರೋಪಿಸಿದರು.ಆದರೆ, ತುರ್ತಾಗಿ ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಜಸ್ಟಿಸ್ ಮಿಶ್ರಾ ಅವರು, ಅಗ್ನಿ ನಿರೋಧಕ ವ್ಯವಸ್ಥೆ ಸ್ಥಾಪಿಸಿ ಎಂದು ಹೇಳಿದರು.
ಅಲ್ಲದೇ, ಹೈಕೋರ್ಟ್ ಸಂಪರ್ಕಿಸಿ ಎಂದು ಅರ್ಜಿದಾರರಿಗೆ ಸೂಚಿಸಿದರು. ಥಗ್ ಲೈಪ್ ಜೂನ್ 5 ರಂದು ಕರ್ನಾಟಕ ಹೊರತುಪಡಿಸಿ ದೇಶಾದ್ಯಂತ ಬಿಡುಗಡೆಯಾಗಿದೆ.1987 ರ “ನಾಯಕನ್” ನಂತರ ನಿರ್ದೇಶಕ ಮಣಿರತ್ನಂ ಹಾಗೂ ನಟ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ‘ಥಗ್ ಲೈಫ್ ‘ ಮೂಡಿಬಂದಿದೆ.
ಆದರೆ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಕಮಲ್ ಹಾಸನ್ ಹೇಳಿಕೆ ಸಾಕಷ್ಟು ವಿವಾದಕ್ಕೆ ಗುರಿಯಾದ ನಂತರ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ. ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ.