ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಡಿಯಲು ನೀರು ಕೊಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಮದುವೆಯೇ ಮುರಿದು ಬಿದ್ದಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ನಡೆದಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಕೆಲಸದಲ್ಲಿರುವ ಜಗಳೂರು ಮೂಲದ ಯುವಕ ಹಾಗೂ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಶಿರಾ ಮೂಲದ ಯುವತಿ ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು. ಯುವಕ-ಯುವತಿ ಇಬ್ಬರೂ ಸಾಫ್ಟ್‌ವೇರ್ ಕಂಪನಿಯಲ್ಲಿ ಇಂಜಿನಿಯರ್ ವೃತ್ತಿ ಮಾಡುತ್ತಿದ್ದರು.
ಹಿರಿಯೂರು ನಗರದ ಹೊರ ವಲಯದಲ್ಲಿರುವ ಬಲಿಜ ಕಲ್ಯಾಣ ಮಂಟಪದಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಂಪ್ರದಾಯದಂತೆ ಇತ್ತ ಯಾವುದೇ ಸಮಸ್ಯೆ ಇಲ್ಲದೆ ಶನಿವಾರ ರಾತ್ರಿ ರಿಸೆಪ್ಷನ್ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದರು.
ತಡ ರಾತ್ರಿ ವಧುವಿನ ಕಡೆಯವರು ಕುಡಿಯಲು ನೀರು ಕೇಳಿದ್ದಾರೆ. ಆಗ ವರನ ಕಡೆಯವರು ಕ್ಯಾಟರಿಂಗ್ ಮಾಡಿಸಿದ್ದು ಈಗ ತಡವಾಗಿದೆ. ಇಷ್ಟು ಹೊತ್ತಿಗೆ ನೀರು ಕೊಡಲ್ಲ. ಅವರು ಎಲ್ಲ ಬೀಗ ಹಾಕಿಕೊಂಡು ತೆರಳಿದ್ದಾರೆ. ನಮ್ಮಿಂದ ಕೊಡಲು ಸಾಧ್ಯವಿಲ್ಲ. ಬೇರೆ ಕಡೆ ಕುಡಿಯಿರಿ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಇದರಿಂದ ಬೇಸರಗೊಂಡ ವಧು(ಯುವತಿ)ವಿನ ಕಡೆಯವರು ನೀರಿಲ್ಲದಿದ್ದರೆ ಹೆಂಗೆ, ಮದುವೆಗೆ ಆಗಮಿಸಿರುವ ಸಂಬಂಧಿಕರಿಗೆಲ್ಲ ಕುಡಿಯಲು ನೀರು ನೀಡಿದ್ದರೆ ಹೇಗೆ, ಅದೂ ಅಲ್ಲದೆ ಕಲ್ಯಾಣ ಮಂಟಪ ಊರ ಹೊರಭಾಗದಲ್ಲಿದೆ. ಇಷ್ಟೊತ್ತಿನಲ್ಲಿ ನೀರು ಎಲ್ಲಿ ಸಿಗುತ್ತದೆ, ಈಗ ಏನು ಮಾಡುವುದು ಎಂದು ಕಾರಣ ತಿಳಿಸಿ ವಧುವಿನ ಕಡೆಯವರೇ ಮದುವೆ ರದ್ದುಗೊಳಿಸಿದ್ದಾರೆ. ಹೀಗೆ ಶುರುವಾದ ಮನಸ್ತಾಪ ಹಸೆಮಣೆ ಏರುವ ಮೊದಲೇ ಮದುವೆ ಮುರಿದು ಬೀಳಲು ಕಾರಣವಾಗಿದೆ ಎಂದು ವರನ ದೊಡ್ಡಪ್ಪ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಏಕಾಏಕಿ ವಧು ಮದುವೆ ನಿರಾಕರಣೆ ಮಾಡಿದ್ದಕ್ಕೆ ವರ ಕಂಗಾಲಾಗಿದ್ದಾನೆ. ಆ ರಾತ್ರಿ ನೀರಿನ ಜಗಳಮರೆತು ಮದುವೆಗೆ ಒಪ್ಪುವಂತೆ ವರ ಹಾಗೂ ಆತನ ಪೋಷಕರು ವಧುವಿಗೆ ಹಾಗೂ ಆಕೆಯ ಕುಟುಂಬಕ್ಕೆ ಮನವಿ ಮಾಡಿದ್ದಾರೆ. ಆದರೆ ಈ ವರನ ಜೊತೆ ಮದುವೆ ಬೇಡವೇ ಬೇಡ ಎಂದು ವಧು ನಿರಾಕರಿಸಿ, ಗಂಟು ಮೂಟೆ ಕಟ್ಟಿಕೊಂಡು ಸಂಬಂಧಿಕರು ಮನೆಗೆ ತೆರಳಿದ ಘಟನೆ ನಡೆದಿದೆ.ಮದುವೆ ಕಾರ್ಯ ನಡೆಯುತ್ತಿದ್ದ ಕಲ್ಯಾಣ ಮಂಟಪಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ ಘಟನೆ ಕೂಡಾ ಜರುಗಿದೆ. ಒಟ್ಟಾರೆ ಕ್ಷುಲ್ಲಕ ಕಾರಣ ನೀಡಿ ಹಸೆಮಣೇ ಏರು ಸಂದರ್ಭದಲ್ಲಿ ಮದುವೆ ಮುರಿದು ಬಿದ್ದಿರುವುದು ಸೋಜಿಗವಾಗಿದೆ.