ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಆಧುನಿಕತೆ ಎಷ್ಟೇ ಬೆಳೆದರೂ ಮಠಮಾನ್ಯಗಳ ತ್ರಿವಿಧ ದಾಸೋಹದ ಮಹಿಮೆಯ ಸತ್ಯವನ್ನು ಸರಿಗಟ್ಟಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಬೆಳ್ಳಾವಿಯಲ್ಲಿ ಕಾರದ ವೀರಬಸವ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಬೆಳ್ಳಾವಿಯ ಶ್ರೀಮಠದಲ್ಲಿನ ಕಾರದ ಶಿವಯೋಗಿಗಳ ಕರ್ತೃ ಗದ್ದುಗೆ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಕನ್ನಡ ನಾಡಿನ ಮಠಮಾನ್ಯಗಳ ಪರಂಪರೆಯಲ್ಲಿ ತ್ರಿವಿಧ ದಾಸೋಹ ಎಂಬುದು ಬಸವಮಾರ್ಗವಾಗಿದೆ, ದೈವ ಮಾರ್ಗವಾಗಿದೆ, ಮೋಕ್ಷ ಮಾರ್ಗವಾಗಿದೆ ಎನ್ನುವುದನ್ನು ಇಂದಿನ ಪೀಳಿಗೆ ಅರಿಯಬೇಕಿದೆ. ಕರ್ನಾಟಕವೆಂದರೆ ಮಠದ ಸಂಸ್ಕೃತಿ, ಮಠದ ಸಂಸ್ಕೃತಿ ಎಂದರೆ ತ್ರಿವಿಧ ದಾಸೋಹದ ಸಂಸ್ಕೃತಿ, ತ್ರಿವಿಧ ದಾಸೋಹ ಎಂದರೆ ಪರಿಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಸಂಸ್ಕೃತಿ ಈ ನಿಟ್ಟಿನಲ್ಲಿ ಕರ್ನಾಟಕದ ಮಠ ಮಾನ್ಯಗಳ ಪರಂಪರೆ ಮೂಲಕ ಹರಚರ ಗುರುಮೂರ್ತಿಗಳು ಶತಶತಮಾನಗಳಿಂದಲೂ ಈ ನಾಡಿಗೆ ಕೊಟ್ಟಿರುವ ಕೊಡುಗೆ ಅನನ್ಯವಾದುದು. ಶತ ಶತಮಾನಗಳು ಕಳೆದರೂ ಈ ನೆಲದ ಸಂಸ್ಕೃತಿಯನ್ನು ಗಟ್ಟಿಯಾಗಿ ಬೇರೂರಿಸಿರುವುದು ಮಠಮಾನ್ಯಗಳ ಕೊಡುಗೆಯಾಗಿರುವ ಕುರಿತು ವಿಜಯೇಂದ್ರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಅಟವಿ ಶಿವಲಿಂಗ ಶ್ರೀಗಳು, ಮೃತ್ಯುಂಜಯ ದೇಶೀ ಕೇಂದ್ರ ಶ್ರೀಗಳು, ಈಶ್ವರಾನಂದಪುರಿ ಶ್ರೀಗಳು, ತ್ರಿನೇತ್ರ ಮಹಾಂತ ಶಿವಯೋಗಿಗಳು, ರುದ್ರಮುನಿ ಶ್ರೀಗಳು, ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್, ಶಾಸಕರಾದ ಬಿ.ಸುರೇಶ್ ಗೌಡ, ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ ಸೇರಿದಂತೆ ವಿವಿಧ ಮಠಗಳ ಪರಮಪೂಜ್ಯರು, ಹರಗುರು ಚರಮೂರ್ತಿಗಳು, ಸಮಾಜದ ಗಣ್ಯರು ಹಾಗೂ ಶ್ರೀಮಠದ ಭಕ್ತಾದಿಗಳು ಉಪಸ್ಥಿತರಿದ್ದರು.