ಚಂದ್ರವಳ್ಳಿ ನ್ಯೂಸ್, ನ್ಯಾಮತಿ:
ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಗೋಮಾಳಜಾಗ ಮಂಜೂರು ಮಾಡಿದ್ದಕ್ಕೆ ತಾಲೂಕು ದಂಡಾಧಿಕಾರಿ ಕಚೇರಿ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿಯಲ್ಲಿ ಜರುಗಿದೆ.
ನ್ಯಾಮತಿ ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮಸ್ಥರು ಐದು ಸಾವಿರ ಕುರಿಗಳನ್ನು ತಹಶಿಲ್ದಾರ್ ಕಚೇರಿಗೆ ನುಗ್ಗಿಸಿ ವಿನೂತನ ಪ್ರತಿಭಟನೆ ಮಾಡಿದರು. ದೊಡ್ಡೆತ್ತಿನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂಬರ್ 32ರ ನಾಲ್ಕು ಎಕರೆ ಗೋಮಾಳ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದೇ ಜಾಗದಲ್ಲಿ ಕುರಿಗಾಹಿಗಳು, ಸಾವಿರಾರು ಜಾನುವಾರುಗಳನ್ನು ಗ್ರಾಮಸ್ಥರು ನಿತ್ಯ ಮೇಯಿಸುತ್ತಿದ್ದರು. ಇಲ್ಲಿ ಕಟ್ಟಡ ಕಟ್ಟಿದ್ದೇ ಆದಲ್ಲಿ ಮೇವಿಗೆ ತೊಂದರೆಯಾಗುತ್ತದೆ. ಆದ್ದರಿಂದ ಪರ್ಯಾಯ ಜಾಗದಲ್ಲಿ ಕಟ್ಟಡ ಕಟ್ಟುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು.
ಈಗಾಗಲೇ ಸ್ಥಳೀಯ ಗೋಮಾಳ ಜಾಗವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಕೊಡಲಾಗಿದೆ. ಇದು ತಪ್ಪು. ಮೊದಲೇ ಕುರಿಗಾಯಿಗಳಿಗೆ ಹಾಗೂ ಜಾನುವಾರುಗಳಿಗೆ ಮೇಯಿಸಲು ಜಾಗವಿಲ್ಲ. ಅಂತಹದರಲ್ಲಿ ಅವೈಜ್ಞಾನಿಕವಾಗಿ ದೊಡ್ಡೆತ್ತಿನಹಳ್ಳಿಯಲ್ಲಿನ ಗೋಮಾಳದಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಮುಂದಾಗಿದ್ದು ಇದನ್ನು ವಿರೋಧಿಸಿ 5 ಸಾವಿರ ಕುರಿಗಳೊಂದಿಗೆ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿಗಳು ಸರ್ಕಾರದಿಂದ ಡಿನೋಟಿಫಿಕೇಷನ್ ಮಾಡಿಕೊಂಡು ಪಟ್ಟಣದ ಪಕ್ಕದಲ್ಲಿರುವ ಬೇರೆ ಜಾಗವನ್ನು ಖರೀದಿಸಿ ಅಲ್ಲಿ ಕಟ್ಟಡ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಮನವಿ ಮಾಡಿದರು.
ಗ್ರಾಮದ ಸುಜಾತ ಮಾತನಾಡಿ, ನಮ್ಮೂರಿನ ಗೋಮಾಳ ಕಬಳಿಸುವಂತಹ ಕೆಲಸ ನಡೆಯುತ್ತಿದೆ. ಸ್ಥಳೀಯರೊಂದಿಗೆ ಯಾವುದೇ ಸಭೆ ನಡೆಸದೇ ಅಧಿಕಾರಿಗಳು ಸರ್ಕಾರಿ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇಲ್ಲಿ ಕಟ್ಟಡ ಕಟ್ಟಲು ನಮಗೆ ಸಹಮತ ಇಲ್ಲ. ಇಲ್ಲಿ 5 ಸಾವಿರ ಕುರಿಗಳಿದ್ದು, ಒಂದು ವೇಳೆ ಇದೇ ಜಾಗದಲ್ಲಿ ಕಟ್ಟಡ ಕಟ್ಟಿದ್ದಲ್ಲಿ ಕುರಿಗಳ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಯಾವುದೇ ಕಾರಣಕ್ಕೂ ಗೋಮಾಳ ಬಿಟ್ಟುಕೊಡುವುದಿಲ್ಲ. ಬೇರೆ ಜಾಗದಲ್ಲಿ ಕಟ್ಟಡ ಕಟ್ಟಿ ಕುರಿಗಾಹಿಗಳಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ಅವರು ತಾಲೂಕು ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.
ಗ್ರಾಮಸ್ಥರೊಂದಿಗೆ ಅಸಭ್ಯವಾಗಿ ವರ್ತಿಸಿದ ಆಡಳಿತ ಅಧಿಕಾರಿಯನ್ನು ಕೂಡಲೇ ವಜಾ ಮಾಡಬೇಕು. ಅಲ್ಲದೇ ಗೋಮಾಳ ಜಾಗವನ್ನು ಗ್ರಾಮಕ್ಕೆ ಬಿಟ್ಟುಕೊಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

