ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ, ದೂರದೃಷ್ಟಿಯ ಆಡಳಿತಗಾರ ಕೆಂಗಲ್ ಹನುಮಂತಯ್ಯ ಅವರ ಜಯಂತಿಯ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಆವರಣದಲ್ಲಿರುವ ಹನುಮಂತಯ್ಯನವರ ಪ್ರತಿಮೆಯ ಮುಂಭಾಗ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ನಾಡಿನ ಮುಖ್ಯಮಂತ್ರಿಯಾಗಿ ಜನಪರ ಕಾರ್ಯಗಳನ್ನು ಅನುಷ್ಠಾನ ಮಾಡುವ ಜೊತೆಗೆ ಏಕೀಕೃತ ಕರ್ನಾಟಕ ನಿರ್ಮಾಣದ ಸಂಕಲ್ಪತೊಟ್ಟು, ಮುಂಚೂಣಿಯಲ್ಲಿ ನಿಂತು ಆ ಹೋರಾಟವನ್ನು ಮುನ್ನಡೆಸಿದ ಧೀಮಂತ ನಾಯಕ ಕೆಂಗಲ್ ಹನುಮಂತಯ್ಯ ಅವರು.
ಮಾಲಾರ್ಪಣೆ:
ಸಿಎಂ ಸಿದ್ದರಾಮಯ್ಯ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಇದೇ ವೇಳೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರು, ರಾಜ್ಯ ಕಂಡ ಪ್ರಾಮಾಣಿಕ ಹಾಗೂ ಧೀಮಂತ ರಾಜಕಾರಣಿ. ಸುಂದರವಾದ ಭವ್ಯವಾದ ವಿಧಾನಸೌಧ ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಾಯಕರಾಗಿ, ಕೇಂದ್ರದ ರೈಲ್ವೆ ಮಂತ್ರಿಯಾಗಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.
ಸಂವಿಧಾನ ರಚನಾ ಸಮಿತಿಗೆ ಅಮೂಲ್ಯ ಸಲಹೆಗಳನ್ನು ನೀಡಿ, ರಾಷ್ಟ್ರ ನಿರ್ಮಾಣದಲ್ಲಿ ಕೊಡುಗೆಯನ್ನು ನೀಡಿದಂತಹ ಧೀಮಂತ ರಾಜಕಾರಣಿಯೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ಪ್ರಥಮ ಚುನಾಯಿತ ಮುಖ್ಯಮಂತ್ರಿಯಾಗಿದ್ದರು. ಹನುಮಂತಯ್ಯನವರು ವಿಧಾನಸೌಧಕ್ಕೆ ಬುನಾದಿ ಹಾಕಿದರಾದರೂ, ಉದ್ಘಾಟನೆಯ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿಯಾಗಿ ಇರಲಿಲ್ಲವೆಂಬುದು ನೋವಿನ ಸಂಗತಿ. ಅವರ ಆದರ್ಶ ಮತ್ತು ಸಿದ್ಧಾಂತಗಳು ಎಲ್ಲರಿಗೂ ಮಾರ್ಗದರ್ಶನ ನೀಡುತ್ತವೆ ಎಂದು ಸಿಎಂ ಹೇಳಿದರು.
ಇಂತಹ ಮಹಾನ್ ಚೇತನಗಳಸೇವೆ, ಸಮರ್ಪಣೆಯ ಫಲವಾಗಿ ಇಂದು ಅಖಂಡ ಕರ್ನಾಟಕ ನಿರ್ಮಾಣವಾಗಿದೆ ಎಂಬುದನ್ನು ಪ್ರತಿಯೊಬ್ಬ ಕನ್ನಡಿಗನು ನೆನೆಯಬೇಕು.
ಸಂಪೂರ್ಣ ಶಿಲಾಮಯವಾದ ಭವ್ಯ ವಿಧಾನಸೌಧ ಕಟ್ಟಡ ಸ್ಥಾಪಿಸಿ, ಕರ್ನಾಟಕ ವಿಧಾನಸಭೆಗೆ ಹೊಸ ಗುರುತು ನೀಡಿದ ಕೆಂಗಲ್ ಹನುಮಂತಯ್ಯ ಅವರ ಜೀವನ ಸಾಧನೆಗಳನ್ನು ಅವರ ಜಯಂತಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ಮರಿಸಿ ನಮನಗಳನ್ನು ಅರ್ಪಿಸಿದರು.

