ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಬಿಜೆಪಿಯಿಂದ ಅಧಿಕೃತವಾಗಿ ವಕ್ಫ್ ಹೋರಾಟ ಆರಂಭವಾಗಿದೆ. ಇದರ ಬೆನ್ನ ಹಿಂದೆಯೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒಂದು ಬಣವಾದರೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಣವಾಗಿ ಮಾರ್ಪಟ್ಟಿದೆ. ಹೀಗಾಗಿ ಬಿಜೆಪಿಯಲ್ಲಿ ವಕ್ಫ್ ಹೋರಾಟದಲ್ಲಿ ಭಿನ್ನಮತ ಸ್ಫೋಟವಾಗಿದೆ.
ರಾಜ್ಯ ಬಿಜೆಪಿಯಿಂದ ಅಧಿಕೃತವಾಗಿ ವಕ್ಫ್ ಹೋರಾಟ ಕುರಿತ ಪ್ರವಾಸ ತಂಡದಲ್ಲಿ ಸೇರ್ಪಡೆ ಮಾಡಿದ್ದರೂ ಪ್ರತ್ಯೇಕ ಮಿತ್ರಕೂಟದಿಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ತಂಡ ಬೀದರ್ ನಿಂದ ಜನ ಜಾಗೃತಿ ಅಭಿಯಾನ ಪ್ರಾರಂಭಿಸಿದೆ.
ಯತ್ನಾಳ್ ತಂಡದ ಅಭಿಯಾನದಿಂದ ಬೀದರ್ ಜಿಲ್ಲೆಯ ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡಿದ್ದರೆ, ಬೀದರ್ ಜಿಲ್ಲಾಧ್ಯಕ್ಷರಂತೂ ಯಾರೋ ಅನಾಮಿಕರು ಬಿಜೆಪಿ ಬ್ಯಾನರ್ ನಲ್ಲಿ ವಕ್ಫ್ ಹೋರಾಟ ಮಾಡುತ್ತಿದ್ದಾರೆ. ಅನುಮತಿ ಪಡೆಯದೇ ಬಿಜೆಪಿ ಚಿಹ್ನೆ ಬಳಸಿರುವ ಕಾರಣ ಬ್ಯಾನರ್ ತೆರವುಗೊಳಿಸುವಂತೆ ಪೊಲೀಸ್ ದೂರು ನೀಡಿದ್ದಾರೆ.
ರಾಜ್ಯ ಬಿಜೆಪಿ ಕೂಡಾ ಯತ್ನಾಳ್ ಹೋರಾಟಕ್ಕೂ ಪಕ್ಷಕ್ಕೂ ಸಂಬಂಧಿವಿಲ್ಲ ಎಂದು ಸ್ಪಷ್ಟಪಡಿಸಿಬಿಟ್ಟಿದೆ. ಇದೆಲ್ಲದರ ಮಧ್ಯ ಯತ್ನಾಳ್, ನಾವು ಹೊಸ ಟೀಂ ಕಟ್ಟೋಣ ಎನ್ನುವ ಸಂದೇಶ ರವಾನಿಸಿದ್ದಾರೆ.
ಕಲಬುರಗಿಯಲ್ಲಿ ಮಂಗಳವಾರ ವಕ್ಫ್ ವಿರುದ್ಧ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿ ಬಸನಗೌಡ ಪಾಟೀಲ್ ಯತ್ನಾಳ್, ಇವರೆಲ್ಲ ಒರಿಜನಲ್ ಕಾರ್ಯಕರ್ತರಲ್ಲ. ಇವರೆಲ್ಲರೂ ರಾತ್ರಿ ಕಾಂಗ್ರೆಸ್ ನಾಯಕರ ಜೊತೆಯಲ್ಲೇ ಇರುತ್ತಾರೆ. ಬೆಳಗ್ಗೆ ಇಲ್ಲಿ ಜೈಶ್ರೀರಾಮ್ ಅಂತಾರೆ, ಅಂತಹವರು ನಮಗೆ ಬೇಡ. ನಾವು ಹೊಸ ಟೀಂ ಕಟ್ಟೋಣ, ನೀವೇನೂ ತಲೆಕೆಡಿಸಿಕೊಳ್ಳಬೇಡಿ ಎಂದು ಎಂದು ಬಹಿರಂಗವಾಗಿಯೇ ಕರೆ ಕೊಟ್ಟರು.
ಕಲಬುರಗಿಯಲ್ಲಿ ನಮ್ಮ ಪಕ್ಷದ ಬಹಳಷ್ಟು ಮುಖಂಡರು ನಮ್ಮ ಜೊತೆ ಬರಲಿಕ್ಕಿಲ್ಲ. ಈಗ ರಾಜಕುಮಾರ್ ಪಾಟೀಲ್ ತೇಲ್ಕೂರ ಬಂದಿದ್ದಾರೆ. ಮುಂದೆ ಒಬ್ಬೊಬ್ಬರೇ ನಮ್ಮ ಜೊತೆ ಬರುತ್ತಾರೆ. ಮುಂದೆ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತೆ. ಹೈಕಮಾಂಡ್ ಗೆ ನನ್ನ ವಿರುದ್ದ ಪತ್ರ ಬರೆಯುತ್ತಿರುವುದು ಹೊಸದೇನೂ ಅಲ್ಲ. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ರೂಮ್ ತುಂಬಿವೆ. ಆದರೆ ಏನು ಮಾಡಕ್ಕಾಗಿಲ್ಲಎಂದು ಪರೋಕ್ಷವಾಗಿ ವಿಜಯೇಂದ್ರಗೆ ಟಾಂಗ್ ಕೊಟ್ಟರು.
ವಾಗ್ದಾಳಿ ಮುಂದುವರಿಕೆ-
ಬಿ.ವೈ.ವಿಜಯೇಂದ್ರ ಹೋರಾಟನೇ ಮಾಡಲ್ಲ. ವಿಜಯೇಂದ್ರ ವಕ್ಫ್ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ? ಯಾವ ಹಳ್ಳಿಗೆ ಹೋಗಿ ರೈತರ ಮನವಿ ಸ್ವೀಕರಿಸಿದ್ದಾನೆ ತೋರಿಸಿ. ರಾತ್ರಿಯಾದ್ರೆ ಸಾಕು ಡಿಕೆ-ಸಿದ್ದರಾಮಯ್ಯ ಮನೆಯಲ್ಲಿ ಇರ್ತಾರೆ. ಅವರು ಎಲ್ಲಿ ರೈತರ ಪರವಾಗಿ ಹೋರಾಟ ಮಾಡ್ತಾರೆ.
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೂರೆಂಟು ಕೇಸ್ ಇದೆ. ಕಾಪಾಡೋ ಶಿವಪ್ಪ ಅಂತಾ ಡಿಸಿಎಂ ಡಿಕೆ ಮನೆಯಲ್ಲಿ ಇರ್ತಾರೆ. ಕಾಪಾಡೋ ಸಿದ್ದರಾಮಯ್ಯ ಅಂತಾ ಅವರ ಮನೆಯಲ್ಲಿ ಇರ್ತಾರೆ ಎಂದು ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ತೀವ್ರ ರೀತಿಯಲ್ಲಿ ಯತ್ನಾಳ್ ವಾಗ್ದಾಳಿ ಮಾಡಿದರು.
ಕೆಲವರ ಗೈರು-
ಯತ್ನಾಳ್ ಟೀಮ್ ಮಂಗಳವಾರದಿಂದ ವಕ್ಫ್ ಜನ ಜಾಗೃತಿ ಅಭಿಯಾನ ಆರಂಭಿಸಿದೆ. ಆದರೆ ಬೀದರ್ ಜಿಲ್ಲೆಯಲ್ಲಿರುವ ವಿಜಯೇಂದ್ರ ಮತ್ತು ಯಡಿಯೂರಪ್ಪ ಆಪ್ತ ಶಾಸಕರು ಯಾರೂ ಅಭಿಯಾನದತ್ತ ತಲೆ ಹಾಕಿಲ್ಲ. ಕಲಬುರಗಿಯಲ್ಲೂ ಸಹ ಬಿಎಸ್ವೈ ಬಣದಲ್ಲಿ ಗುರುತಿಸಿಕೊಂಡಿರುವ ಅವಿನಾಶ್ ಜಾಧವ್ ಹಾಗೂ ಬಸವರಾಜ್ ಮುತ್ತಿಮೂಡ್ ಯತ್ನಾಳ್ ಅಭಿಯಾನಕ್ಕೆ ಗೈರಾಗಿದ್ದಾರೆ.
ಯತ್ನಾಳ್ ಟೀಮ್ ಅಭಿಯಾನ ಮುಂದುವರಿಯುತ್ತಿದ್ದಂತೆಯೇ ಇತ್ತ ಯತ್ನಾಳ್ ವಿರುದ್ಧ ಕ್ರಮದ ವಿಚಾರದಲ್ಲೂ ವಿಜಯೇಂದ್ರ ಗಂಭೀರವಾಗುತ್ತಿದ್ದಾರೆ. ಈಗಾಗಲೇ ಯತ್ನಾಳ್ ನಡೆ ಬಗ್ಗೆ ಹೈಕಮಾಂಡ್ ಗೆ ಮಾಹಿಗಿ ರವಾನಿಸಲ್ಪಟ್ಟಿದ್ದು, ಸಂಸತ್ ಅಧಿವೇಶನದ ವೇಳೆ ಖುದ್ದು ದೆಹಲಿಗೆ ತೆರಳಿ ವರಿಷ್ಠರ ಜೊತೆ ಚರ್ಚೆಗೆ ಮುಂದಾಗಿದ್ದಾರೆ.
ಒಟ್ಟಾರೆ ಬೆಳಗಾವಿ ಅಧಿವೇಶನದಲ್ಲಿ ಒಟ್ಟಾಗಿ ವಕ್ಫ್ ವಿಚಾರವಾಗಿ ಒಟ್ಟಾಗಿ ಹೋರಾಡಬೇಕಿದ್ದ ವಿಪಕ್ಷ ಬಿಜೆಪಿ ಈಗಾಗಲೇ ಎರಡು ಭಾಗವಾಗಿದೆ.