ನಗರದ ಮುಖ್ಯ ರಸ್ತೆ ಅಗಲೀಕರಣ ಖಚಿತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾನೂನು ತೊಡಕುಗಳು ಉಂಟಾಗದಂತೆ ಎಚ್ಚರಿಕೆ ವಹಿಸಿ, ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳುವ ಸಂಬಂಧ ಚಿತ್ರದುರ್ಗ ನಗರಸಭೆಯ ಕಚೇರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ,

ಮೊದಲ ಹಂತದಲ್ಲಿ ಚಿತ್ರದುರ್ಗ ನಗರದ ಚಳ್ಳಕೆರೆ ಸರ್ಕಲ್ನಿಂದ ಕನಕ ವೃತ್ತದವರೆಗೆ ರಸ್ತೆಯ ಮಧ್ಯಭಾಗದಿಂದ 21 ಮೀಟರ್ ಗಳ ಅಗಲೀಕರಣ ಕಾರ್ಯ ಕೈಗೊಳ್ಳಲು ಈಗಾಗಲೆ ನಿರ್ಧರಿಸಲಾಗಿದೆ.  ಚಿತ್ರದುರ್ಗ ನಗರದ ಅಭಿವೃದ್ಧಿಯ ದೃಷ್ಟಿಯಿಂದ ಕಾರ್ಯವನ್ನು ಕೈಗೊಳ್ಳುವುದು ಖಚಿತ.   ಕಾರ್ಯದಲ್ಲಿ ಯಾವುದೇ ಕಾನೂನು ತೊಡಕುಗಳು ಅಡ್ಡಿಯಾಗದಂತೆ ನೋಡಿಕೊಳ್ಳಲು, ಪೂರಕವಾದ ಸೂಕ್ತ ದಾಖಲಾತಿಗಳು, ನಕ್ಷೆಗಳ ಮೂಲ ಪ್ರತಿಗಳನ್ನು ಸಂಗ್ರಹಿಸಬೇಕು ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ದಾಖಲಾತಿಗಳನ್ನು ಸಂಗ್ರಹಿಸಿ, ಶಾಸಕರ ಗಮನಕ್ಕೆ ತರಬೇಕು, ದಾಖಲೆಗಳ ಪರಿಶೀಲನೆ ಬಳಿಕವೇ ಅಗಲೀಕರಣ ಪ್ರಾರಂಭಿಸಬೇಕು.   ಕಾರ್ಯ ಹದಿನೈದು ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು.  ಈಗಿನ ಪ್ರಮುಖ ರಸ್ತೆ ಮೊದಲು ರಾಷ್ಟ್ರೀಯ ಹೆದ್ದಾರಿಯಾಗಿತ್ತು,  ಹೀಗಾಗಿ ರಸ್ತೆಗೆ ಸಂಬಂಧಿಸಿದ ದಾಖಲೆ ಹಾಗೂ ನಕ್ಷೆಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬಳಿ ಲಭ್ಯವಿರುವ ಸಾಧ್ಯತೆಗಳಿವೆ.  ಒಟ್ಟಾರೆಯಾಗಿ ಮೂಲ ದಾಖಲೆಗಳನ್ನು ಸಂಗ್ರಹಿಸಿ, ಪರಿಶೀಲಿಸಿ, ರಸ್ತೆ ಅಗಲೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ವೀರೇಂದ್ರ ಪಪ್ಪಿ ಅವರು ಸೂಚನೆ ನೀಡಿದರು.

      ಚಿತ್ರದುರ್ಗ ನಗರದಲ್ಲಿನ ಜನಸಂಖ್ಯೆ, ವಾಹನಗಳ ಸಂಖ್ಯೆ, ಸಂಚಾರ ದಟ್ಟಣೆ, ಮುಖ್ಯ ರಸ್ತೆಯಲ್ಲಿನ ವ್ಯಾಪಾರ ವಹಿವಾಟು, ಸರಕು ವಾಹನಗಳ ನಿಲುಗಡೆ, ಸಂಚಾರ ನಿಯಮಗಳ ಪಾಲನೆ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ಚಿತ್ರದುರ್ಗ ನಗರವನ್ನು ಉತ್ತಮವಾಗಿ ಅಭಿವೃದ್ಧಿಪಡಿ, ನಗರಸಭೆಯನ್ನು ಮಹಾನಗರಪಾಲಿಕೆಯನ್ನಾಗಿಸುವ ನಿಟ್ಟಿನಲ್ಲಿ ನಗರಸಭೆಯ ಅಧ್ಯಕ್ಷರಾಗಿರುವ ಸುಮಿತಾ ಅವರಿಗೆ ಉತ್ತಮ ಅವಕಾಶವಿದ್ದು, ನಿಟ್ಟಿನಲ್ಲಿ ಅವರು ಕೂಡ ರಸ್ತೆ ಅಗಲೀಕರಣ ಕಾರ್ಯಕ್ಕೆ ಕೈಜೋಡಿಸುವಂತೆ ಶಾಸಕ ವೀರೇಂದ್ರ ಪಪ್ಪಿ ಅವರು ಮನವಿ ಮಾಡಿದರು.

ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್ ಅವರು ಚಿತ್ರದುರ್ಗ ನಗರದ ಅಭಿವೃದ್ಧಿಗೆ ಪೂರಕವಾಗಿ ರಸ್ತೆ ಅಗಲೀಕರಣ ಕಾರ್ಯವನ್ನು ಯಾವುದೇ ಕಾನೂನು ತೊಡಕು ಬಾರದ ರೀತಿಯಲ್ಲಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಬಳಿಕವೇ ಅಗಲೀಕರಣ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.

    ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಎಸ್. ನವೀನ್, ನಗರಸಭೆ ಅಧ್ಯಕ್ಷೆ ಸುಮಿತಾ, ಪೌರಾಯುಕ್ತೆ ರೇಣುಕಾ, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್, ಲೋಕೋಪಯೋಗಿ ಇಲಾಖೆ ಎಇಇ ಚಂದ್ರಪ್ಪ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನವೀನ್, ನಗರಸಭೆ ಕಾನೂನು ಸಲಹೆಗಾರ ಉಮೇಶ್, ನಗರಸಭೆ ಎಇಇ ಸತ್ಯನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";