ಸಹೋದರಿಯರ ಅದ್ಭುತ ಭೇಟಿ ಸಂಭ್ರಮ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ ಮಂಗಳವಾರ ರಾತ್ರಿ ದೊಡ್ಡಪೇಟೆ ರಸ್ತೆಯಲ್ಲಿ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಗ್ರಾಮದೇವತೆಗಳಾದ ಶ್ರೀ ಬರಗೇರಮ್ಮ ಮತ್ತು ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯರು ಅತ್ಯಂತ ಸುಂದರವಾಗಿ ಅಲಂಕಾರಗೊಂಡು ತಮ್ಮ ಮೂಲ ದೇವಸ್ಥಾನಗಳಿಂದ ಹೊರಟು ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯ ಭೇಟಿ ಉತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾದರು. ಮಂಗಳವಾರ ರಾತ್ರಿ 10.30ಕ್ಕೆ ಅಕ್ಕ-ತಂಗಿಯರು ಭೇಟಿಯಾಗಿ ಸಂಭ್ರಮಸಿದರು.

ಅಕ್ಕ-ತಂಗಿಯರ ಭೇಟಿ ಉತ್ಸವ ಎಂದೇ ಜನಜನಿತವಾಗಿರುವ ಈ ಉತ್ಸವ ಜಾನಪದ ಸೊಗಡಿನ ಹಿನ್ನೆಲೆ ಹೊಂದಿದೆ. ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆ ಧಾರಿಗಳು, ಉರುಮೆನಾದ. ತಮಟೆಗಳ ಸದ್ದು, ಡೊಳ್ಳುವಾದನಗಳು ಭೇಟಿಯ ಉತ್ಸವಕ್ಕೆ ಮೆರುಗು ನೀಡಿದ್ದವು. ಅತ್ಯಂತ ಸುಂದರವಾಗಿ ಪುಷ್ಪಾಲಂಕೃತಗೊಂಡಿದ್ದ ಅಕ್ಕ-ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುತ್ತಿರುವ ದೃಶ್ಯ ಸೊಗಸಾಗಿತ್ತು.

ಈ ದೃಶ್ಯ ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಅಕ್ಕ-ತಂಗಿಯವರು ಪರಸ್ಪರ ಭೇಟಿಯಾಗುತ್ತಿದ್ದಯೇ ಸುತ್ತ-ಮುತ್ತಲು ನೆರದಿದ್ದ ಭಕ್ತಾಧಿಗಳು ಸೀಳ್ಳು, ಕೇಕೆ, ಚಪ್ಪಾಳೆ ಹೊಡೆಯುವುದರ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಭವ್ಯ ಮೆರವಣಿಗೆ- ಜನ ಜಾತ್ರೆಯ ನಡುವೆ ರಾಜಬೀದಿಯಲ್ಲಿ ಅಕ್ಕ-ತಂಗಿಯರ ದಿವ್ಯ ಸಮಾಗಮ ಸಾಂಪ್ರದಾಯಿಕ ಅಪೂರ್ವ ಸಂಗಮ ಕಣ್ತುಂಬಿಕೊಂಡ ಭಕ್ತರಲ್ಲಿ ಪುನೀತ ಭಾವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ರಾಜಬೀದಿಯಲ್ಲಿ.

ರಂಗಯ್ಯನ ಬಾಗಿಲು ಕಡೆಯಿಂದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿ ವಯ್ಯಾರದಿ ಆಗಮಿಸಿದರೆ, ಇತ್ತ ಉಚ್ಚಂಗಿ ಎಲ್ಲಮ್ಮ ದೇಗುಲದ ಕಡೆಯಿಂದ ಬಂಗಾರಿ ಬರಗೇರಮ್ಮ ದೇವಿ ಬಿಂಕದಿ ಆಗಮಿಸಿ ಎಲ್ಲರನ್ನು ಅಚ್ಚರಿಗೊಳಿಸಿದಳು!
ಇನ್ನು ಈ ವಿಶೇಷ ಉತ್ಸವಕ್ಕೆ ಜಿಲ್ಲಾಡಳಿತ
, ನಗರಸಭೆ, ಪೊಲೀಸ್ ಇಲಾಖೆ ಹಾಗೂ ದೇಗುಲ ಸಮಿತಿಗಳು ಈ ವರ್ಷ ವಿಶೇಷ ಸಿದ್ಧತೆ ಮಾಡಿಕೊಂಡಿದ್ದವು.

ರಾಜಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದರು. ಅಕ್ಕ-ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಅಕ್ಕ-ತಂಗಿಯರ ಅಪರೂಪದ ಸಂಗಮ ವೈಭವದಿಂದಲೇ ನಡೆಯಿತು. ಸಾವಿರಾರು ಜನ ಭಕ್ತರು ಅಪೂರ್ವ ಸಂಗಮ ಕಣ್ಣು ತುಂಬಿಕೊಂಡು ಪುನೀತ ಭಾವ ಅನುಭವಿಸಿದರು. ಸಾಂಪ್ರದಾಯಿಕ ಉತ್ಸವ ಮಾನವೀಯ ಸಂಬಂಧಗಳ ಬಗ್ಗೆ ವಿಶೇಷ ಸಂದೇಶ ರವಾನಿಸುವ ಮೂಲಕ ಜನರ ಮನ ಶುದ್ಧಗೊಳಿಸುವ ಮೂಲಕ ಸಾರ್ಥಕತೆ ಪಡೆಯಿತು.
ಈ ಅಪರೂಪದ
, ವೈಭವದ ಭೇಟಿ ಉತ್ಸವವನ್ನು ನೋಡಲು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

ಜಾತ್ರೆಯ ಅಂಗವಾಗಿ ವಿವಿಧ ರೀತಿಯ ಅಂಗಡಿಗಳು ಬಂದಿದ್ದು, ಇದರಲ್ಲಿ ವಿವಿಧ ರೀತಿಯ ಧ್ವನಿ ಮಾಡುವ ಸಾಧನೆಗಳನ್ನು ಖರೀದಿಸಿದ ಯುವ ಜನತೆ ಅದರಿಂದ ಧ್ವನಿ ಮಾಡುವುದರ ಮೂಲಕ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಅಕ್ಕ-ತಂಗಿಯರು ಭೇಟಿ ಮಾಡುವ ಸ್ಥಳದವರೆಗೂ ಹೋಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಕ್ಕ-ತಂಗಿಯ ಭೇಟಿ ಸುಗಮವಾಗಿ ನಡೆಯಲು ಪೊಲೀಸ್ ಇಲಾಖೆ ಸಂಜೆಯಿಂದಲೇ ಶ್ರಮವನ್ನು ಹಾಕಿತ್ತು. ಪುರುಷ ಮತ್ತು ಮಹಿಳಾ ಪೊಲೀಸರು ಜನತೆಯನ್ನು ನಿಭಾಯಿಸುವಲ್ಲಿ ಮುಂದಾಗಿದ್ದರು.

ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು, ನಗರಸಭೆ ಸದಸ್ಯರು, ಮಾಜಿ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಇತರರು ಭಾಗವಹಿಸಿದ್ದರು.

 

 

Share This Article
error: Content is protected !!
";