ಸರ್ಕಾರದ ಕೆಲಸ ದೇವರ ಕೆಲಸ- ಸಚಿವ ಕೃಷ್ಣ ಬೈರೇಗೌಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ನಮ್ಮ ಸರ್ಕಾರದ ಧ್ಯೇಯ ಕಾಯಕವೇ ಕೈಲಾಸವಾಗಿದ್ದು, ವಿಧಾನಸೌಧ ಮುಂದೆ ಬರೆದಿರುವಂತೆ ಸರ್ಕಾರದ ಕೆಲಸ ದೇವರ ಕೆಲಸವೆಂದು ತಿಳಿದು ಕೆಲಸ ಮಾಡಬೇಕು.  ಸರ್ಕಾರದ ಮೌಲ್ಯ ಏನು ಎಂಬುದು ಮನವರಿಕೆಯಾಬೇಕು, ಕೈಲಾದ ಮಟ್ಟಿಗೆ ಬದ್ಧತೆಯಿಂದ ಕೆಲಸ ಮಾಡಿ ಋಣ ತೀರಿಸಬೇಕು ಎಂದರು.

ತಂತ್ರಜ್ಞಾನದ ಕಾಲದಲ್ಲಿಯೂ ಟಪಾಲ್ ವ್ಯವಸ್ಥೆಯಿಂದ ಕೆಲಸಗಳು ವಿಳಂಬವಾಗುವುದನ್ನು ತಡೆಗಟ್ಟಲು ಹಾಗೂ ಎಲ್ಲಾ ದಾಖಲೆಗಳನ್ನು ಡಿಜಟಲೀಕರಣ ಮಾಡಲು ಸಿಬ್ಬಂದಿಗಳಿಗೆ ಲ್ಯಾಪ್ ಟಾಪ್ ವಿತರಿಸಲಾಗುತ್ತಿದೆ.  ಎಲ್ಲಾ ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುವುದು ಎಂದರು.

ಭೂ ಸುರಕ್ಷಾ ಯೋಜನೆಯಡಿ 19 ಕೋಟಿಗೂ ಹೆಚ್ಚು ಪುಟಗಳ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಅದೇ ರೀತಿ ಭೂ ಆಸ್ತಿಗೆ ಮಾಲಿಕರ ಆಧಾರ್ ಜೋಡಣೆ, ಸ್ವಯಂಚಾಲಿತ ಮ್ಯುಟೇಷನ್, ಕಾಗದ ರಹಿತ ಇ-ಆಫೀಸ್, ಆಪ್ ಆಧಾರಿತ ಬರಖಾಸ್ತು, ಪೋಡಿ, ಬಗರ್ ಹುಕುಂ ಮತ್ತು ಸರ್ಕಾರಿ ಭೂಮಿಗಳ ಸಂರಕ್ಷಣೆ ಮಾಡಲಾಗುವುದು ಎಂದರು.

ಇಂದಿನಿಂದಲೇ ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಚಾಲನೆ ನೀಡಲಾಗುವುದು. ಪಹಣಿ ಮತ್ತು ಮ್ಯುಟೇಷನ್ ಮಾಡಲು 30 ದಿನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ 12 ಗಂಟೆಯೊಳಗೆ ಮಾಡುತ್ತಿದ್ದೇವೆ.  ತಹಸೀಲ್ದಾರ್ ಕೋರ್ಟಿನಲ್ಲಿ ಅವಧಿ ಮೀರಿ ಉಳಿದಿದ್ದ 10,700 ಪ್ರಕರಣಗಳಲ್ಲಿ 10,284 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಕೇವಲ 416 ಪ್ರಕರಣಗಳು ಮಾತ್ರ ಬಾಕು ಉಳಿದಿವೆ.  ಉಪವಿಭಾಗಾಧಿಕಾರಿಗಳ ಕೋರ್ಟ್‍ನಲ್ಲಿ 69,800 ಪ್ರಕರಣಗಳು ಇದ್ದು, ಇದರಲ್ಲಿ 21 ಸಾವಿರ ಪ್ರಕರಣಗಳನ್ನು ವಿಲೇ ಮಾಡಲಾಗಿದೆ ಎಂದರು.

ಕಂದಾಯ ಇಲಾಖೆಯು ಹುಟ್ಟಿನಿಂದ-ಮರಣದವರೆಗೆ ಸಂಪರ್ಕ ಇರುವ  ಮಾತೃ ಇಲಾಖೆಯಾಗಿದ್ದು, ಸರ್ಕಾರದ ಬೆನ್ನೆಲುಬಾಗಿದೆ. ಇದಕ್ಕೆ ವೇಗ ತರಲು ತಂತ್ರಜ್ಞಾನ ಅಳವಡಿಸಲಾಗಿದೆ.  ಭೂ ದಾಖಲೆಗಳ ನಿರ್ವಹಣೆ ಇಲ್ಲದೆ ಜನರಿಗೆ ನೆಮ್ಮದಿ ಇರಲಿಲ್ಲ.  ಜನರಿಗೆ ನೆಮ್ಮದಿ ತರಬೇಕು ಎನ್ನುವ ಉದ್ದೇಶದಿಂದ ಭೂ ಗ್ಯಾರಂಟಿ ಯೋಜನೆ ಜಾರಿಗೆ ತರಲಾಗಿದೆ. ಉತ್ತಮ ಅಧಿಕಾರಿಗಳ ತಂಡವಿದ್ದು, ಅವರ ಸಹಕಾರದಿಂದ  ಸುಧಾರಣೆಯ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ತರೀಕೆರೆಯ ಶಾಸಕ ಶ್ರೀನಿವಾಸ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಪಿ. ಸುನೀಲ್ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

 

 

Share This Article
error: Content is protected !!
";