ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯದಲ್ಲಿ ಅನೇಕ ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಸಾಲ ಸೋಲ ಮಾಡಿ ಗುತ್ತಿಗೆ ಕಾಮಗಾರಿ ಮಾಡುತ್ತಾರೆ. ಆದರೆ ಟೆಂಡರ್ ಕರೆಯುವ ಮುನ್ನ, ಟೆಂಡರ್ ಕರೆದ ನಂತರ ಗುತ್ತಿಗೆದಾರರು ಆಯಾಯ ಜನಪ್ರತಿನಿಧಿಗಳನ್ನ ಭೇಟಿ ಮಾಡುವಂತ ಕೆಟ್ಟ ಪದ್ಧತಿ ಕೊನೆಯಾಗಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಅವರು ಹೇಳಿದರು.
ನಗರದ ಚಳ್ಳಕೆರೆ ರಸ್ತೆಯ ಎಸ್.ಜಿ. ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗುತ್ತಿಗೆದಾರರ ಸಂಘದಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಚಿತ್ರದುರ್ಗದ ಆರ್.ಮಂಜುನಾಥ್‌ಗೆ ಅಭಿನಂದನಾ ಸಮಾರಂಭ ಉದ್ಘಾಟನಾ ಸಮಾರಂಭಂದಲ್ಲಿ ಅವರು ಮಾತನಾಡಿದರು.2013-2018ರ ಅವಧಿಯಲ್ಲಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಯಾವೊಬ್ಬ ಗುತ್ತಿಗೆದಾರರು ನನ್ನ ಕ್ಷೇತ್ರದಲ್ಲಿ ಕಾಣುವಂತ ಪರಿಸ್ಥಿತಿ ಇಟ್ಟುಕೊಂಡಿರಲಿಲ್ಲ. ಕಾಮಗಾರಿ ಪೂಜೆ ಅಥವಾ ಉದ್ಘಾಟನೆಗೆ ಕರೆದರೂ ನೀವೇ ಮಾಡಿ ಎಂದು ಹೇಳುತ್ತಿದ್ದೆ. ಆದರೆ ಇತ್ತೀಚೆಗೆ ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರದಲ್ಲಿ ಶಾಸಕರುಗಳನ್ನ ಕಂಡರೇ ಮಾತ್ರ ಟೆಂಡರ್ ಕ್ರಿಯೆಗೆ ಮುಕ್ತಿ ಸಿಗಲಿದೆ. ಇದು ಅತ್ಯಂತ ಕೆಟ್ಟ ಪದ್ಧತಿಯಾಗಿದ್ದು ಈ ಪದ್ಧತಿ ಕೊನೆಗೊಳ್ಳಬೇಕು ಎಂದು ಹಾಲಿ, ಮಾಜಿ ಶಾಸಕರ ಹೆಸರೇಳದೆ ಆಂಜನೇಯ ಅವರು ಹರಿಹಾಯ್ದರು.
ಟೆಂಡರ್ ಪಡೆದಿರುವ ಗುತ್ತಿಗೆದಾರರು ಸಾಲ ಸೋಲ ಮಾಡಿ ಕಾಮಗಾರಿಗಳಿಗೆ ಕೈಯಿಂದ ಬಂಡವಾಳ ಹೂಡಿ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ. ಗುತ್ತಿಗೆದಾರರು ನಡೆಸುವ ಕಾಮಗಾರಿಗಳು ಸರ್ಕಾರ ಮತ್ತು ಸಮಾಜಕ್ಕೆ ಉಪಯೋಗವಾಗುತ್ತದೆ. ೨೦೧೩ ರಿಂದ ೧೮ ರವರೆಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರಿಗೆ ಸುವರ್ಣ ಯುಗವಾಗಿತ್ತು. ಗುತ್ತಿಗೆದಾರರಲ್ಲಿಯೂ ಪೈಪೋಟಿಯಿರುವುದರಿಂದ ಟೆಂಡರ್ ಕರೆಯುವ ಮುನ್ನವೇ ಗುತ್ತಿಗೆದಾರರು ಸಂಬಂಧಪಟ್ಟವರನ್ನು ಕಾಣುವಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಯಕ್ಕೆ ಸರಿಯಾಗಿ ನಿಮಗೆ ನೀಡಿರುವ ಅವಧಿಯೊಳಗೆ ಗುತ್ತಿಗೆದಾರರು ಕಾಮಗಾರಿಗಳನ್ನು ಪೂರೈಸಬೇಕು. ಜಿಲ್ಲೆಯಲ್ಲಿ ಗುತ್ತಿಗೆದಾರರು ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಹಾಕಿದ ಬಂಡವಾಳಕ್ಕೆ ಲಾಭವೂ ಸಿಗಲಿ. ಹಣವಿಲ್ಲದೆ ಟೆಂಡರ್ ಕರೆಯುವ ಕೆಟ್ಟ ಪದ್ದತಿಯನ್ನು ಗುತ್ತಿಗೆದಾರರು ಮೊದಲು ವಿರೋಧಿಸಬೇಕು. ಸಾಮಾಜಿಕ ನ್ಯಾಯದ ಹರಿಕಾರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಜಾತಿಯ ಬಡವರಿಗೂ ಅನುಕೂಲ ಕಲ್ಪಿಸುತ್ತಿದ್ದಾರೆಂದು ಆಂಜನೇಯ ಮೆಚ್ಚುಗೆ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಬಿಡ್ ಮೊತ್ತಕ್ಕಿಂತ ಶೇ.10 ರಿಂದ 20 ರಷ್ಟು ಲೆಸ್ ಮೊತ್ತಕ್ಕೆ ಟೆಂಡರ್ ಹಾಕುತ್ತಿರುವುದು ಕೂಡ ಅಪಾಯಕಾರಿ. ಟೆಂಡರ್ ಮೊತ್ತಕ್ಕೆ ಶೇ.10 ರಷ್ಟು ಹೆಚ್ಚಳ ಮಾಡಿ ಟೆಂಡರ್ ಹಾಕಿದರೆ ಗುಣಮಟ್ಟದ ಕಾಮಗಾರಿ ಮಾಡಲು ಸಾಧ್ಯ. ಶೇ.20 ರಷ್ಟು ಟೆಂಡರ್ ಮೊತ್ತಕ್ಕೆ ಕಡಿಮೆ ಹಾಕಿದರೆ ಗುಣಮಟ್ಟದ ಕಾಮಗಾರಿ ಮಾಡಲು ಹೇಗೆ ಸಾಧ್ಯ, ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರ ಶಾಸಕರನ್ನ ಕಾಣಲು ಎಲ್ಲಿಂದ ಹಣ ತರುತ್ತೀರಿ ಎಂದು ಕಿವಿ ಮಾತು ಹೇಳಿದರು.