ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದ್ದು, ಒಳನುಗ್ಗಿದ ದುಷ್ಕರ್ಮಿಗಳು ಹುಂಡಿ ಹಾಗೂ ದೇವಿಯ ತಾಳಿ ಆಭರಣವನ್ನು ಕದ್ದೊಯ್ದಿರುವುದು ತಿಳಿದುಬಂದಿದೆ.
ಜನವಸತಿ ಪ್ರದೇಶದಲ್ಲೇ ಇರುವ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಮಾಹಿತಿ ತಿಳಿದ ಕೂಡಲೇ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಗ್ರಾಮದಲ್ಲಿ ಅಪರಿಚಿತರ ವಲಸೆ ಕಾರ್ಮಿಕರ ಸಂಚಾರ ಹೆಚ್ಚಾಗಿರುವುದು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಹಾವಳಿ ಕಂಡು ಬರುತ್ತಿರುವುದರಿಂದ ಗ್ರಾಮಸ್ಥರಲ್ಲಿ ಭದ್ರತೆ ಕುರಿತ ಆತಂಕ ಮತ್ತಷ್ಟು ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ತಾಲ್ಲೂಕಿನಾದ್ಯಾಂತ ದೇವಸ್ಥಾನ ಹುಂಡಿ ಕಳವು ನಿಧಿ ಶೋಧನೆಗಾಗಿ ವಿಗ್ರಹ ಕಳವು ಐತಿಹಾಸಿಕ ಪರಂಪರೆ ಹಿನ್ನೆಲೆಯ ರಾಜ ಹಾಗು ಪಾಳೆಗಾರರ ಆಳ್ವಿಕೆಯ ಕಾಲದ ದೇವಾಲಯಗಳನ್ನು ದ್ವಂಸ ಮಾಡಿರುವ ಘಟನೆಗಳು ಕಂಡು ಬರುತ್ತಿದ್ದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಹೆಚ್ಚಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲಾಗಿದೆ.

