ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡ ಬೆಳವಂಗಲ ಹೋಬಳಿ ತಿಪ್ಪೂರು ಗ್ರಾಮ ಅನೆಲೀಂಗೇಶ್ವರ ದೇವಾಲಯದಲ್ಲಿ ಬುಧವಾರ ತಡರಾತ್ರಿ ಕಳ್ಳತನ ನಡೆದಿದೆ.
ದೇವಾಲಯದ ಗೇಟ್ ಬೀಗ ಬಾಗಿಲು ಮುರಿದು ದೇವಾಲಯದ ಒಳ ಪ್ರವೇಶಿಸಿದ ಕಳ್ಳರು ಭಕ್ತರು ನೀಡಿದ ಕಾಣಿಕೆ ಹುಂಡಿ ಹೊಡೆದು ಹುಂಡಿಯಲ್ಲಿದ್ದ ಹಣ ಮತ್ತು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಭಕ್ತರು ನೀಡಿದ ಕಾಣಿಕೆ ಹುಂಡಿ ಒಡೆದು ಎಣಿಕೆ ಮಾಡಲಾಗಿತ್ತು ಅ ಸಂದರ್ಭದಲ್ಲಿ ನಾಲ್ಕು ಲಕ್ಷ ರೂ ಹೆಚ್ಚು ಹಣ ಸಂಗ್ರವಾಗಿತ್ತು.
ನಂತರ ಮೇ ತಿಂಗಳಲ್ಲಿ ಆನೆ ಲಿಂಗೇಶ್ವರ ದೊಡ್ಡ ದೇವರ ಜಾತ್ರೆ ಮಹೋತ್ಸವ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಕುಲ ಬಾಂಧವರು ಹಾಗು ಭಕ್ತರಿಂದ ಹೆಚ್ಚಿನ ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿತ್ತು ಎಂದು ಗ್ರಾಮದ ಮುಖಂಡ ಮುತ್ತೇಗೌಡ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಗ್ರಾಮಸ್ಥರು ರಸ್ತೆಯಲ್ಲಿ ತೆರಳುವಾಗ ದೇವಸ್ಥಾನದ ಬಾಗಿಲು ಹೊಡೆದು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ಬಗ್ಗೆ ದೊಡ್ಡ ಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಿಸಿ ಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ದೇವಾಲಯಗಳನ್ನು ಗುರಿಯಾಗಿಸಿಕೊಂಡ ಸರಣಿ ಕಳ್ಳತನ ಪ್ರಕರಣಗಳು ಪೊಲೀಸರ ಹಾಗೂ ಗ್ರಾಮಸ್ಥರ ತಲೆ ಬಿಸಿ ಹೆಚ್ಚಿಸಿದೆ.

