ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂದು ಹ್ಯೂಬ್ಲೆಟ್ ವಾಚ್ ವಾಪಸ್ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಇಂದು 14 ಸೈಟುಗಳನ್ನು ವಾಪಸ್ ಕೊಟ್ಟಿದ್ದಾರೆ ಕರ್ಮರಿಟರ್ನ್ಸ್ ಎಂದು ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ವಾಗ್ದಾಳಿ ಮಾಡಿದೆ.
“ಸಿದ್ಧಕಲೆ”ಯ ಸುಳ್ಳುಗಳು ವಿಜೃಂಭಿಸಬಹುದು. ಆದರೆ ಸತ್ಯಕ್ಕೆ ಜಯ! “ಉಲ್ಟಾರಾಮಯ್ಯ!!” ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ತಪ್ಪೇ ಮಾಡಿಲ್ಲ, ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಎಂದು ಮೊಂಡುತನ ತೋರುತ್ತಿದ್ದ ಸಿಎಂ, ಈಗ “ಮುಡಾ” ಹಗರಣ “ತಮ್ಮ ಬುಡಕ್ಕೆ” ಬರುತ್ತಿದ್ದಂತೆ ಧರ್ಮಪತ್ನಿಯವರ ಹೆಸರಿನಲ್ಲಿ ಅಕ್ರಮವಾಗಿ ಪಡೆದಿರುವ 14 ಸೈಟುಗಳನ್ನು ಸರೆಂಡರ್ ಮಾಡಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.
ಇದು ಮುಡಾ ಹಗರಣದ ವಿರುದ್ಧ ಎನ್ ಡಿಎ ಮೈತ್ರಿ ಪಕ್ಷವಾದ ಜೆಡಿಎಸ್ ಮತ್ತು ಬಿಜೆಪಿ ನಡೆಸಿದ “ಮೈಸೂರು ಚಲೋ” ಪಾದಯಾತ್ರಗೆಸಿಕ್ಕ ಗೆಲುವು ಇದಾಗಿದೆ.
ಸ್ವತಃ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸುಳಿ ಬಿಗಿದುಕೊಳ್ಳುತ್ತಿದ್ದಂತೆಯೇ ಅವರಿಗೆ ತಪ್ಪಿನ ಅರಿವಾಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ಆದರೆ ಅಕ್ರಮವಾಗಿ ಪಡೆದಿರುವ ಸೈಟುಗಳನ್ನು ಹಿಂತಿರುಗಿಸಿದರಷ್ಟೇ ಸಾಲದು. ಕಳಂಕ ಹೊತ್ತಿರುವ ಮುಖ್ಯಮಂತ್ರಿಗಳು ಗೌರವಯುತವಾಗಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲೇಬೇಕು. ಸತ್ಯಮೇವ ಜಯತೇ ಎಂದು ಜೆಡಿಎಸ್ ಹೇಳಿದೆ.