ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಖ್ಯಮಂತ್ರಿ ಆಗುವ ಅರ್ಹತೆ ಸತೀಶ್ ಜಾರಕಿಹೊಳಿ ಅವರಿಗಿದೆ. ಆದರೆ, ನಮ್ಮಲ್ಲಿ ಈಗ ಸಿಎಂ ಕುರ್ಚಿ ಖಾಲಿಯಿಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಜಾರಕಿಹೊಳಿ ಬಗ್ಗೆ ಯತೀಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಮಾತನಾಡಿದ ಪಾಟೀಲ್ ಅವರು, ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದನ್ನು ಗಮನಿಸಬೇಕು. ಸಿದ್ದರಾಮಯ್ಯ ಅವರನ್ನು ಬಿಟ್ಟು ಚುನಾವಣೆ ಮಾಡೋಕೆ ಆಗಲ್ಲ. ಸಿದ್ದರಾಮಯ್ಯಗೆ ಕೊನೆ ಚುನಾವಣೆ ಆಗಿರಬಹುದು. ಮುಂದೆಯೂ ಅವರ ನಾಯಕತ್ವ ಅಗತ್ಯವಿದೆ ಎಂದು ಸಚಿವರು ತಿಳಿಸಿದರು.
ತುಮಕೂರಿಗೆ ಯತೀಂದ್ರ ಹೋಗಿದ್ರೆ ಅಲ್ಲಿ ಪರಮೇಶ್ವರ್ ಬಗ್ಗೆ ಹೇಳ್ತಿದ್ರು.ವಿಜಯಪುರಕ್ಕೆ ಹೋಗಿದ್ದರೆ ನನ್ನ ಬಗ್ಗೆ ಹೇಳುತ್ತಿದ್ದರು. ಇದಕ್ಕೆಲ್ಲಾ ಸುಣ್ಣ ಬಣ್ಣ ಹಚ್ಚೋದು ಬೇಡ. ಸತೀಶ್ ಜಾರಕಿಹೊಳಿ ಪ್ರಮುಖ ನಾಯಕರು. ಡಿಕೆಶಿ, ಎಂ.ಬಿ.ಪಾಟೀಲ್, ಸತೀಶ್ ಅಂತಿಮ ಅಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪಾಟೀಲ್ ತಿಳಿಸಿದರು.
ಯಾರೇ ಆಗಲಿ ಸ್ವಯಂಘೋಷಿತ ಮುಖ್ಯಮಂತ್ರಿಆಗೋಕೆಆಗಲ್ಲ. ಜನರ ಅಭಿಪ್ರಾಯ ಬೇಕು. ಶಾಸಕರು ಬಯಸಬೇಕು. ಆ ಮೇಲೆಜನರು ಹೇಳಬೇಕು. ನಂತರ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಂ ಕುರ್ಚಿಗೆ ಸಾಕಷ್ಟು ಜನ ಅರ್ಹರಿದ್ದಾರೆ. ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ ಸೇರಿದಂತೆ ಪಕ್ಷದ ಹಲವು ನಾಯಕರು ಸಮರ್ಥರಿದ್ದಾರೆ. ಆದರೆ ಹೈಕಮಾಂಡ್ ತೀರ್ಮಾನ ಮಾಡಬೇಕು ಎಂದು ಎಂ.ಬಿ ಪಾಟೀಲ್ ಸೂಚ್ಯವಾಗಿ ಹೇಳಿದರು.
ಸಂಪುಟ ಪುನಾರಚನೆ ಕುರಿತು ಮಾತನಾಡಿದ ಸಚಿವರು, ಪುನಾರಚನೆ ಕುರಿತು ಹೈಕಮಾಂಡ್ ತೀರ್ಮಾನ ಮಾಡಬೇಕು. ಸದಾಶಿವನಗರದಲ್ಲೇ ಹೈಕಮಾಂಡ್ ಇದೆ. ಖಾತೆ ಹಂಚಿಕೆ ಸಿಎಂ ಪರಮಾಧಿಕಾರ. ನಾವು ಇಂತಹ ಖಾತೆ ಬೇಕು ಅಂತಾ ಕೇಳೋಕೆ ಆಗುತ್ತಾ?. ನಮ್ಮ ಆಸೆ ವ್ಯಕ್ತಪಡಿಸಬಹುದು. ಆದರೆ ಮಾಡಬೇಕಿರೋದು ಸಿಎಂ ತಾನೇ ಎಂದರು.
ಕಿರಣ್ ಮಜುಂದಾರ್ ಸಿಎಂ-ಡಿಸಿಎಂ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಪಾಟೀಲ್, ಬೆಂಗಳೂರಿನ ಸಮಸ್ಯೆಗಳ ಕುರಿತು ಉದ್ಯಮಿ ಕಿರಣ್ ಮಜುಂದಾರ್ ಅವರು ಗಮನ ಸೆಳೆದಿದ್ದಾರೆ. ರಸ್ತೆ ಗುಂಡಿ ಬಗ್ಗೆ ಕೇಳಿದ್ದಾರೆ. ನಾವು 1,000 ಕೋಟಿ ರೂ ಅನುದಾನದಲ್ಲಿ ಕೆಲಸ ಪ್ರಾರಂಭಿಸಿ, ರಸ್ತೆ ಗುಂಡಿ ಮುಚ್ಚುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಯತೀಂದ್ರ ಹೇಳಿಕೆ:
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕಪ್ಪಲಗುದ್ದಿ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಯತೀಂದ್ರ ನೀಡಿದ್ದ ಹೇಳಿಕೆ ಸಂಚಲನ ಮೂಡಿಸಿತ್ತು. ನಮ್ಮ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. 2028ರ ಚುನಾವಣೆಯಲ್ಲಿ ಸ್ಪರ್ಧಿಸಲ್ಲ.
ಜಾತ್ಯತೀತ ಕಾಂಗ್ರೆಸ್ ಸಿದ್ದಾಂತ ಇಟ್ಟುಕೊಂಡ ಎಷ್ಟೋ ಜನ ರಾಜಕಾರಣಿಗಳಿದ್ದಾರೆ. ಅವರೆಲ್ಲರನ್ನೂ ಸತೀಶ್ ಜಾರಕಿಹೊಳಿಮುನ್ನಡೆಸಲಿ. ಸಿದ್ದರಾಮಯ್ಯ ಹೊರತುಪಡಿಸಿದರೆ ಅವರ ಸ್ಥಾನ ತುಂಬುವ ಶಕ್ತಿ ಸತೀಶ್ ಜಾರಕಿಹೊಳಿಗೆ ಖಂಡಿತ ಇದೆ ಎಂದು ಹೇಳುವ ಮೂಲಕ ರಾಜಕೀಯ ಬಿರುಗಾಳಿ ಎಬ್ಬಿಸಿದ್ದನ್ನು ಸ್ಮರಿಸಬಹುದಾಗಿದೆ.

