ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಾಡಿನಲ್ಲಿ ಒಂದು ನರಿಯು ಹಸಿವಿನಿಂದ ಕಂಗಾಲಾಗಿ ಹೊಟ್ಟೆಗೆ ಏನಾದರೂ ಸಿಗಬಹುದು ಎಂದು ಅಲ್ಲಿ-ಇಲ್ಲಿ ಹುಡುಕಾಡುತ್ತಿತ್ತು ಅದರ ಹೊಟ್ಟೆಗೆ ಬೇಕಾಗುವುದೇನು ಸಿಗಲಿಲ್ಲ ಆದರೆ ಅದಕ್ಕೊಂದು ಗೋಟು ಅಡಕೆ ಸಿಕ್ಕಿತು ಅದನ್ನೇ ಎತ್ತಿಕೊಂಡು ಮನದಲ್ಲಿಯೇ ಯೋಚಿಸಿತು
ಏನೋ ಉಪಾಯ ಹೊಳೆದಂತಾಗಿ ಆ ಕಾಡಿನಲ್ಲಿ ಇದ್ದಂತಹ ಒಂದು ಕಿರು ಕಾಲು ದಾರಿಯ ಪಕ್ಕದಲ್ಲಿ ಚಿಕ್ಕ ಹಾಸು ಬಂಡೆ ಇಟ್ಟು ಅದರ ಮೇಲೆ ಅಡಕೆ ಗೋಟನ್ನಿಟ್ಟು ಅದರ ಮುಂದೆ ಕುಳಿತುಕೊಂಡಿತು ಸ್ವಲ್ಪ ಸಮಯದ ನಂತರ ಆ ಹಾದಿಯಲ್ಲಿ ಒಂದು ಹಿರಿಯ ವಯಸ್ಸಿನ ದೊಡ್ಡದಾದ ಕಪಿರಾಯ ಬಂದು ನರಿಯನ್ನು ನೋಡಿ ನರಿಯಪ್ಪ ಇದೇನಿದು ಹೀಗೆ ಕುಳಿತಿರುವೆ ಎಂದು ಪ್ರಶ್ನೆ ಕೇಳಿತು ಅದಕ್ಕೆ ನರಿಯು, ಕಾಣಿಸುತ್ತಿಲ್ಲವೇ ನಾನು ಕಾಡಿನಲ್ಲಿ ಒಂದು ಬೀಡಾ ಅಂಗಡಿ ತೆರೆದಿದ್ದೇನೆ ಇಲ್ಲಿಂದ ಹಾದು ಹೋಗುವ ಮನುಷ್ಯರಿಗೆ ಬೀಡಾ ಮಾರಿ ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಎಂದು ಹೇಳಿತು.
ಅದನ್ನು ಕೇಳಿ ಮಂಗ ಕಿಸಕ್ಕನೆ ನಕ್ಕು ನಿನಗೆಲ್ಲೋ ತಲೆಕೆಟ್ಟಿದೆ ನಾನು ಮನುಷ್ಯರು ಇರುವ ಬಜಾರದಲ್ಲಿಯೇ ಎಷ್ಟೊಂದು ಬಾರಿ ಸುತ್ತಿ ಬರುತ್ತೇನೆ ಈ ಬೀಡಾ ಅಂಗಡಿ ಎಂದರೆ ಕೇವಲ ಒಂದು ಅಡಿಕೆ ಗೋಟಿನಿಂದ ಆಗುವುದಲ್ಲ ಮೊದಲಿಗೆ ವೀಳ್ಯದೆಲೆ ಸುಣ್ಣ ಗುಲ್ಕೊಂದ ಮತ್ತು ಇನ್ನೂ ಅನೇಕ ಸಾಮಾನುಗಳು ಬೇಕಾಗುತ್ತವೆ ಎಂದು ವ್ಯಂಗ್ಯ ಮಾಡಿ ಬುದ್ದಿವಾದ ಹೇಳಿ ಹೋಗುತ್ತದೆ. ಆದರೆ ನರಿಯು ತನ್ನ ಮನಸ್ಸಿನಲ್ಲಿಯೇ ಯೋಚಿಸುತ್ತೆ; ಆಸೆಗಳಿಂದ ಕೂಡಿದ ಮಾನವ ಯಾರೇ ಬರಲಿ ಅವರಿಗೆ ನಾನು ಇಷ್ಟರಲ್ಲಿಯೇ ನನ್ನ ಚತುರತೆಯಿಂದ ಅವರಿಗೆ ಚಳ್ಳೆಹಣ್ಣು ತಿನ್ನಿಸಿಯೇ ತೀರುತ್ತೇನೆ ಎಂದು.
ಈಗ ಇಂತಹ ಎಡಬಿಡಂಗಿ ಗುಳ್ಳೆ ನರಿಗಳು ತಮ್ಮ ಬಳಿ ಏನೂ ಇಲ್ಲದಿದ್ದರೂ ಎಲ್ಲಾ ಇದೆ ಎಂದು ಹೇಳಿಕೊಂಡು ಮೋಸ ಮಾಡಲು ಹೊಂಚು ಹಾಕುತ್ತಿರುತ್ತಾರೆ ನಾವು ಸಹ ಅಂತವರ ಬಳಿ ಯಾವುದೇ ವ್ಯವಹಾರ ಮಾಡದೆ ಸರಿಯಾದವರ ಬಳಿಯೇ ನಮ್ಮ ವ್ಯವಹಾರ ಮಾಡಬೇಕು. ಆದರೆ ಹೀಗೆಲ್ಲ ಸಂಬಂಧವಿಲ್ಲದ ಕೆಲಸವನ್ನು ಸಹ ನಾನು ಮಾಡುತ್ತೇನೆ ಎಂದು ಬೋರ್ಡ್ ಹಾಕಿಕೊಂಡು ಅಥವಾ ಇನ್ಯಾವುದೋ ರೀತಿ ಪ್ರಚಾರ ಮಾಡಿ ತನಗೆ ತಿಳಿಯದ ಆಗದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಡುವುದಾಗಿ ಕತೆ ಕಟ್ಟಿ ಬಣ್ಣ ಹಚ್ಚಿ ಪೂಸಿ ಬಿಟ್ಟು ಕೊನೆಗೆ ಅವರ ಮಾತಿಗೆ ಮರುಳಾಗಿ ಅವರನ್ನು ನಂಬಿದರೆ ನಮ್ಮ ಕೆಲಸ ಕೆಟ್ಟಂತೆಯೇ ಸರಿ. ಇಂತಹ ನರಿ ಬುದ್ಧಿಯವರು ಇರುತ್ತಾರೆಂದೆ ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು.
ಯಾವುದೇ ವ್ಯವಹಾರ ಮಾಡಿದರು ಅರ್ಹ ವ್ಯಕ್ತಿಗಳ ಹತ್ತಿರವೇ ಮಾಡಬೇಕೆಂದು ಉದಾಹರಣೆಗೆ “ಸಾಲ ಮಾಡಿದರು ಸೌಕಾರನ ಬಳಿ ಸಾಲ ಮಾಡಬೇಕು ಯಾವುದೇ ಕಾರಣಕ್ಕೂ ಗಿವ್ಕಾರನ ಬಳಿ ಸಾಲ ಮಾಡಬಾರದು” ಎಂದು. ಏಕೆಂದರೆ, ನೀವು ಒಬ್ಬ ಅರ್ಹ ಸಾಹುಕಾರನ ಬಳಿ ಸಾಲ ಮಾಡಿದರೆ ಆ ಆಸಾಮಿ ನಿಮಗೆ ಕೊಟ್ಟಿರುವ ಹಣದ ಬಗ್ಗೆ ಯಾರ ಹತ್ತಿರವು ಹೇಳಿಕೊಳ್ಳುವುದಿಲ್ಲ ನಿಮ್ಮ ಮರ್ಯಾದೆಗೆ ಭಂಗ ತರುವುದಿಲ್ಲ ಮತ್ತು ವಾಯಿದೆಗಿಂತ ಮುನ್ನ ನಿನ್ನ ಬಳಿ ಸಾಲದ ಬಗ್ಗೆ ಪ್ರಸ್ತಾಪವೇ ಮಾಡುವುದಿಲ್ಲ.
ಆದರೆ ಅದೇ ನಾನು ಸಹ ದೊಡ್ಡ ಸಾಹುಕಾರ ಎಂದು ಅವನಷ್ಟಕ್ಕವನೆ ತಿಳಿದುಕೊಂಡಂತಹ ಒಬ್ಬ ಗಿವ್ಕಾರನ ಬಳಿ ಏನಾದರೂ ಸಾಲ ಮಾಡಿದರೆ ಅಷ್ಟೇ ನಿಮ್ಮ ಮಾನ ಮರ್ಯಾದೆ ಮೂರ್ಕಾಸಿಗೆ ಹರಾಜು ಹಾಕಿ ಬಿಡುತ್ತಾನೆ. ಅವನು ತಾನು ಕೂಡ ಇನ್ನೊಬ್ಬರಿಗೆ ಸಾಲ ಕೊಡುವಂತಹ ಒಬ್ಬ ಸಾವ್ಕಾರ ಎಂದು ಎಲ್ಲರ ಮುಂದೆ ತೋರ್ಪಡಿಸಿಕೊಳ್ಳಲು ಜನ ಸೇರಿರುವಂತಹ ಜಾಗದಲ್ಲಿಯೇ ಸಾಲ ತೆಗೆದುಕೊಂಡವರನ್ನು ಉದ್ದೇಶಿಸಿ ನೋಡಪ್ಪ ವಾಯಿದೆಗೆ ಸರಿಯಾಗಿ ನನ್ನ ಹಣ ವಾಪಸ್ಸು ಕೊಡಬೇಕು ಎಂದು ಎಲ್ಲರಿಗೂ ಕೇಳಿಸುವಂತಹ ಹಲವು ವಿಚಿತ್ರ ಹಿಂಸೆಯನ್ನು ನೀಡುತ್ತಾನಂತೆ.
ಇಂತಹ ಹಲವು ಉದಾಹರಣೆಗಳನ್ನು ನನ್ನ ತಂದೆ ಕೊಡುತ್ತಿದ್ದರು ಆದರೂ ಈಗಿನ ಜೀವನದಲ್ಲಿ ನಾವು ಯಾರನ್ನು ನಂಬಬೇಕೋ ಯಾರನ್ನು ಬಿಡಬೇಕೋ ಗೊತ್ತೇ ಆಗದೆ ಈ ಗುಳ್ಳೆ ನರಿಗಳ ಚಾಣಾಕ್ಷ ಬುದ್ಧಿಗೆ ಮರುಳಾಗಿ ಮೋಸ ಹೋಗುತ್ತಲೇ ಇರುತ್ತೇವೆ. ಕೆಲವು ಕಂಪೆನಿಗಳು ನಾವು ಬ್ರೋಕರೇಜ್ ತೆಗೆದುಕೊಳ್ಳುವುದಿಲ್ಲ ಎಲ್ಲಾ ಉಚಿತ ಎಂದು ಹೇಳಿಕೊಂಡೇ ಆ ಪ್ಲಾನ್ ಈ ಪ್ಲಾನ್ ಎಂದು ಹತ್ತಿಪ್ಪತ್ತು ಸಾವಿರ ಹಣವನ್ನು ಪೀಕಿಸಿಕೊಂಡು ನೆಪ ಮಾತ್ರಕ್ಕೆ ಕೆಲಸ ಮಾಡಿದೆವು ಎಂದು ನಾಮ ಹಾಕಿದರೆ
ಮತ್ತೆ ಕೆಲವರು ತುಂಬಾ ಅರ್ಜೆಂಟ್ ಇದೆ ಎಂದು ಯಾವುದಾವುದೋ ಕಷ್ಟಗಳನ್ನು ತೋಡಿಕೊಂಡು ನಾಳೆ – ನಾಡಿದ್ದು ವಾಪಸ್ಸು ಕೊಡುವುದಾಗಿ ಹೇಳಿ 500/1000/2000/5000 ದಂತಹ ಹಣ ಸಾಲ ಪಡೆದು ಜಾಣ ಕುರುಡರಾಗುತ್ತಾರೆ ಅಲ್ಲದೆ ಇನ್ನೂ ಕೆಲವು ಹಲಾಲ್ ಟೋಪಿವಾಲಗಳು ಇದು ಒಳ್ಳೆ ಜಾಗ ಇದು ಒಳ್ಳೆ ಸೈಟು ಈಗ ನೀವು ತೊಗೊಳ್ಳಿ ಇನ್ನೈದು ತಿಂಗಳು ಆಗಲಿ ನಾವೇ ಡಬಲ್ ರೇಟೆಗೆ ಮಾರಿಸಿ ಕೊಡುತ್ತೇವೆ ಎಂದು ಯಾವುದೋ ಒಂದು ಕೆಟ್ಟ ಕೇಸ್ ಇರುವಂತಹ ಅಥವಾ ಇನ್ಯಾವುದೋ ತೊಂದರೆಯಿರುವಂತಹ ಸೈಟ್ಗಳನ್ನೂ ತಮ್ಮ ಕಮಿಷನ್ ಆಸೆಯಿಂದ ಯಾರಿಗೆ ಬೇಕಾದರೂ ನಾಮ ಹಾಕಲು ಜೊಲ್ಲು ಸುರಿಸುತ್ತ ಗಲ್ಲಿ ಗಲ್ಲಿಗಳಲ್ಲಿ ಕಾದು ಕುಳಿತಿರುತ್ತಾರೆ ಅಲ್ಲದೆ ಇನ್ನೂ ಕೆಲವು ಚಿಕ್ಕ ಚಿಕ್ಕ ಫೈನಾನ್ಸ್ (ಬ್ಲೇಡ್) ಕಂಪೆನಿಗಳು ನಿಮ್ಮ ಹಣವನ್ನು ದುಪ್ಪಟ್ಟು ಲಾಭ ಮಾಡಿಕೊಡುವುದಾಗಿ ನಂಬಿಸಿ ರಾತ್ರೋ ರಾತ್ರಿ ಜಾಗ ಕಾಲಿ ಮಾಡಿ ಹೋಗುತ್ತಾರೆ ಇನ್ನು ಎಷ್ಟೋ ಕಂಪೆನಿಗಳು ತಿಂಗಳಾನುಗಟ್ಟಲೆ ದುಡಿಸಿಕೊಂಡು ಕೆಲಸಗಾರರಿಗೆ ಸಂಬಳವನ್ನೇ ನೀಡದೆ ಮೋಸ ಮಾಡುತ್ತಾರೆ ಅದರಲ್ಲೂ ಈಗಂತೂ ಆನಲೈನ್ ಮೋಸ ಜಾಲಗಳು ಎಂತೆಂತವರಿಗೂ ಬಿಡದಂತೆ ವಂಚನೆಗಳನ್ನು ಮಾಡುತ್ತಲೇ ಇದ್ದಾರೆ.
ಈ ರೀತಿಯ ಹಲವು ವಂಚನೆಗಳಿಗೆ ನಮ್ಮ ಆಸೆಗಳು ಮತ್ತು ಅವರ ಮೇಲಿನ ನಮ್ಮ ದಡ್ಡ ನಂಬಿಕೆಗಳೇ ಕಾರಣ ಅವರು ನಮ್ಮ ಆಲೋಚನೆಗೆ ತಕ್ಕಂತೆ ಸುಳ್ಳು ಹೇಳಿ ಬಲೆ ಬೀಸುತ್ತಾರೆ ಅದರಲ್ಲೂ ಸಾಮಾನ್ಯವಾಗಿ ನಮ್ಮಂತವರೇ ನಮ್ಮ ಅಜ್ಞಾನದ ಕೊರತೆಯಿಂದಾಗಿ ಸುಳ್ಳಿಗೆ ಬೇಗ ಆಕರ್ಷಿತರಾಗುತ್ತೇವೆ ಏಕೆಂದರೆ ಆ ಸಮಯದಲ್ಲಿ ನಮ್ಮ ಆಲೋಚನೆಗಳು ಕೇವಲ ದಿಢೀರ್ ಶ್ರೀಮಂತರಾಗಬಕೆನ್ನುವ ಆಸಗಳೇ ಇರುತ್ತದೆ ಎನ್ನಬಹುದು ಮತ್ತು ಅಂತಹ ನರಿ ಬುದ್ಧಿಯುಳ್ಳ ವಂಚಕರಿಗೆ ಅದೇ ಬಂಡವಾಳವಾಗಿರಬಹುದು ಅದಕ್ಕೆ ಇಂಥ ವ್ಯವಹಾರ ಮಾಡುವಾಗ ವಂಚಕರು ಬುದ್ಧಿವಂತರಾದರೆ ನಮ್ಮಂತ ಗ್ರಾಹಕರು ತಿಳುವಳಿಕೆ ಇರುವಂತಹವರಾಗಬೇಕು
ಪ್ರತಿಯೊಂದನ್ನು ವಿವಾದಾಸ್ಪದಕವಾಗಿ ನೋಡುವಂತಹ ಜ್ಞಾನವನ್ನು ವ್ಯವಹಾರದಲ್ಲಿ ನಾವು ರೂಢಿಗತ ಮಾಡಿಕೊಳ್ಳಲೇಬೇಕು ಏಕೆಂದರೆ ಮೊದಲೇ ಈ ವ್ಯವಹಾರವೆಂಬುವುದು “ವ್ಯವಹಾರಂ ದ್ರೋಹ ಚಿಂತನಂ” ಎನ್ನುವ ಮಂತ್ರದಿಂದಲೇ ನಡೆಯುತ್ತದೆ ಎಂದ ಮೇಲೆ ನಾವು ಸಹ ವ್ಯವಹರಿಸುವ ಮೊದಲು ಅದರ ಬಗ್ಗೆ ಮತ್ತು ವಂಚಕರ ಬಗ್ಗೆ ಸರಿಯಾಗಿ ತಿಳಿದು ಅರಿತು ಪರಾಂಬರಿಸಿ ನೋಡಿ ಹಲವು ಪ್ರಶ್ನೆಗೆ ಉತ್ತರ ಕೇಳಿ ವಿಚಾರಿಸುವ ತಂತ್ರವನ್ನು ನಾವು ಸಹ ಕಲಿಯಲೇ ಬೇಕಾಗಿದೆ ಏಕೆಂದರೆ ವಂಚಕರು ಬುದ್ದಿವಂತರಾದರೆ ನಾವು ತಿಳುವಳಿಕೆಯುಳ್ಳವರಾಗಬೇಕು ಆಗಲೇ ಯಾವುದೇ ವ್ಯವಹಾರವು ಸುಗಮವಾದೀತು.
ಲೇಖನ-ವೆಂಕಟೇಶ ಹೆಚ್ ಚಿತ್ರದುರ್ಗ, ಉಪ ನಿರೀಕ್ಷಕರು, ನವ ದೆಹಲಿ. 9742933400 – 7760023887