ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಗುಸುಗುಸು ಜೋರಾಗಿದೆ. ಬಜೆಟ್ ಗೂ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಸಿಎಂ ಹುದ್ದೆಗಾಗಿ ಹೈಕಮಾಂಡ್ ನಾಯಕರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ.
ಶತಾಯಗತಾಯ ಸಿಎಂ ಪಟ್ಟಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿಕೆ ಶಿವಕುಮಾರ್, ಈ ಬಾರಿ ನೇರವಾಗಿ ಸೋನಿಯಾ ಗಾಂಧಿ ಅವರನ್ನೇ ಭೇಟಿಯಾಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಡಿಕೆ ಶಿವಕುಮಾರ್ ಅವರ ಈ ಕದ್ದು ಮುಚ್ಚಿ ತಂತ್ರಗಾರಿಕೆಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಮುನ್ನೆಲೆಗೆ ಬಂದಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೋ ಕಾದುನೋಡಬೇಕಿದೆ.

