ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು-51
ಗವಿಬಾಗಿಲಿಗೆ ಹೋಗುವ ದಾರಿಯ ಎಡಕ್ಕೆ ಸಾಗಿದರೆ, ಬಸಾಲ್ಡ್ ಶಿಲೆಯ ನುಣುಪಾದ ಬಂಡೆಗಳ ಕಿರು ಬೆಟ್ಟವೊಂದಿದೆ. ಈ ಸ್ಥಳಕ್ಕೆ ತನಿಖಾ ಠಾಣೆಯಿಂದ ಜೋಗಿಮಟ್ಟಿ ರಸ್ತೆ ಮೂಲಕವೂ ಬರಬಹುದು ಆಡುಮಲ್ಲೇಶ್ವರದಿಂದ ಒಳ ಕಾಲುಜಾಡಿನಲ್ಲಿಯೂ ಇಲ್ಲಿಗೆ ತಲುಪಬಹುದು. ದುರ್ಗದ ನೆಲದಲ್ಲಿ ಪ್ರಕೃತಿಯೇ ನಿರ್ಮಿಸಿಕೊಂಡಿರುವ, ಕಿರು ಜಲ ದರ್ಶನವೊಂದು ಈ ಬೆಟ್ಟದಲ್ಲಿ ಕಾಣಬರುತ್ತದೆ.
ಸದಾಕಾಲ ಜಿನುಗುವ ಇದನ್ನು,ಹಿಮವತ್ಕೇಧಾರ ಎಂತಲೂ, ಕರೆಯುವುದುಂಟು. ಮಳೆಗಾಲದಲ್ಲಂತೂ ಕಿರು ಜಲಪಾತವಾಗಿಯೇ ಮೈದಳೆದಿರುತ್ತದೆ. ಬೇಸಿಗೆಯಲ್ಲಿ ಸಣ್ಣಗೆ ಬಸವನ ಬಾಯಿಂದ ಜಲ ಜಿನುಗುವ ಇದು,ತಕ್ಷಣ ನೋಡುಗನನ್ನ ಹಿಮಾಲಯ ತಟದ,ಗವಿ ದೇವಾಲಯಗಳ ಕಡೆಗೂ ಕರೆದೊಯ್ದುಬಿಡುತ್ತದೆ.
ಮಳೆಗಾಲದಲ್ಲಿ ಹಾಲಿನ ನೊರೆಯಯಂತೆ ಧುಮ್ಮಿಕ್ಕುವ ನೀರು, ಬೇಸಿಗೆಯಲ್ಲಿ ಅಗಲದ ಬಂಡೆ ಸಂದುಗಳ ಆಳಕ್ಕೆ ಜಿನುಗಿ,ಸದಾ ನೀರಿಟ್ಟುಕೊಂಡು ನೋಡುಗರನ್ನು ಆಕರ್ಷಿಸುತ್ತದೆ.ಇದರ ಎದುರಿನ ಬಂಡೆಗೆ ಕೆತ್ತಲ್ಪಟ್ಟಿರುವ ನಂದಿಯ ರೂಪ,ಕೊಳದ ಪಶ್ಚಿಮದ ತುದಿಯಿಂದ,ಎದುರಿನ ಲಿಂಗಕ್ಕೆ ಧ್ಯಾನಿಸುವ ಬಂಗಿಯಲ್ಲಿ ಕಾಣಿಸುತ್ತದೆ.
ಕೊಳ ತುಂಬಿ ಜಿನುಗುವ ನೀರು,ಕಲ್ಲು ಪೊಟರೆಗಳಿಂದ ಹಾದು ಹಳ್ಳಕ್ಕೆ ಹರಿಯುತ್ತದೆ. ಇದನ್ನೇ ದೇವರ ಹಳ್ಳವೆಂದು ಕರೆಯುವುದುಂಟು. ಜಾತ್ರೆ ಉತ್ಸವಗಳು ಜರುಗಿದಾಗ, ಜಲಪೂಜೆಗಾಗಿ ಈ ಹಳ್ಳಕ್ಕೆ ಬರುವ ದೇವರುಗಳು, ಮಡಿಯಾಗಿ ಪೂಜೆಗೆ ಅಣಿಗೊಳ್ಳುತ್ತವೆ.ನಗರ ದೇವತೆಗಳು ಇಲ್ಲಿಗೆ ಬರುವುದರಿಂದ,ಇದನ್ನು ದೇವರ ಹಳ್ಳವೆಂದೇ ಭಕ್ತ ಗಣ ಪೂಜಿಸುತ್ತದೆ.
ಇಲ್ಲಿಂದ ದುರ್ಗಮ ಕಾಡುದಾರಿಯಲ್ಲಿ,ಜೋಗಿ ಗದ್ದುಗೆಗೂ ಸಹ ಹೋಗಬಹುದು.ನನ್ನ ಜೀವಿತದ ಸುಧೀರ್ಘ ಹೆಜ್ಜೆಗಳಲ್ಲಿ,ಅತ್ಯಂತ ಕಠಿಣ ಹಾಗೂ ಅಪಾಯದ ಹಾದಿ ಅಂದರೆ ಇದೇ.ಯಾವ ಚಾರಣಿಗರು ಪ್ರಯತ್ನಿಸದ ಹಾದಿಯಿದು.ಆದರೆ ಜೋಗಿ ಜಾಡು,ಅಪಾಯನ್ನ ಉಪಾಯವಾಗಿ ಎದುರಿಸುವ ದಿಟ್ಟ ತಂಡ.
ಅಂದು ದೇವರ ಹಳ್ಳದಿಂದಲೇ ಜೋಗಿಮಟ್ಟಿಗೆ ಹೋಗಬೇಕೆಂದು ತೀರ್ಮಾನಿಸಲಾಯಿತು.ನನಗೆ ನೆನಪಿರುವ ಹಾಗೆ,ದೊಡ್ಡ ಗರಡಿ ಶ್ರೀನಿವಾಸ್ (JMIT), ಶ್ರೀರಾಮ ಪ್ರಿಂಟರ್ಸ್ ರಮೇಶ, ಮಠದ ರಾಜೀವಲೋಚನ, ಕಾನ್ವೆಂಟ್ ಗುರುರಾಜ್ ಮತ್ತು ನಾನು ಸೇರಿ ಐದು ಮಂದಿ ಹೊರಟೆವು.
ಇಂತಹ ಹಾದಿಗಳಲ್ಲಿ ಬಲವಾದ ದೊಣ್ಣೆಯಿಡಿದು ಶ್ರೀನಿವಾಸ್ ಹೆಜ್ಜೆಗಳೇ ಮುಂದೆ. ಚಿಕ್ಕ ವಯಸ್ಸಿನಿಂದಲೂ ಎಮ್ಮೆ, ಹಸು, ಮೇಕೆಗಳ ಒಡನಾಟದಿಂದಲೇ ಕಾಡಿನ ಜಾಡನ್ನ ಕರಗತ ಮಾಡಿಕೊಂಡವ. ಇವತ್ತೇನಾದ್ರೂ ನಾನು, ದೀರ್ಘ ದುರ್ಗಮ ಹಾದಿಗಳನ್ನ, ನೋಡಿದೀನಿ ಓಡಾಡಿದೀನಿ ಅಂದ್ರೆ, ಈ ಶ್ರೀನಿವಾಸ್ ಮುಂದಾಳತ್ವದಲ್ಲಿಯೇ.
ಯಾವ ಯಾವ ಸ್ಥಳಗಳಲ್ಲಿ ಕರಡಿ, ಚಿರತೆಗಳಿವೆ, ಎಲ್ಲಿ ಅಪಾಯಗಳಿವೆ, ವಿಶೇಷವಾಗಿ ಈತನಿಗೆ ಗೊತ್ತಿರುವ ಸಂಗತಿಗಳೇ. ಗರಡಿ ಶ್ರೀನಿವಾಸ್ ಇದ್ರೆನೇ ಹೊಸ ಜಾಡುಗಳ ಅನ್ವೇಷಣೆ.
ಅಂದು ಕಾಡಿನಲ್ಲಿ, ಜಾಡೇ ಇಲ್ಲದ ಕಡೆ ಹೆಜ್ಜೆ ಹಾಕುತ್ತ ಹೊರಟ ನಾವು, ಕಲ್ಲುಬಂಡೆಗಳನ್ನು ಹತ್ತಿ ಇಳಿಯುವುದು ಸಮಸ್ಯೆಯಾಗಲಿಲ್ಲ. ನಮ್ಮೆತ್ತರದಲ್ಲಿ ವಿಸ್ತರಕ್ಕೆ ಬೆಳೆದ ದರ್ಬೆ(ಬಾದೆ)ಹುಲ್ಲಿನ ಸಿವುಡುಗಳಿಂದ ಭಯ.ಕಾಲಿಡಲು ನೆಲವೇ ಕಾಣುವುದಿಲ್ಲ,ಅಂದಾಜಿನ ಮೇಲೆಯೇ ಹೆಜ್ಜೆಗಳಿಡಬೇಕು,ಏನಿದೆಯೋ? ಏನಿಲ್ಲಿವೋ? ಗೊತ್ತಾಗುವುದೇ ಇಲ್ಲ.
ತಗ್ಗುಗಳಿರಬಹುದು, ಕೊರಕಲುಗಳಿರಬಹುದು, ವಿಷದ ಹಾವುಗಳು, ಹೆಬ್ಬಾವುಗಳು,ಮಂಡಲಗಳು,ದರ್ಬೆ ಹುಲ್ಲಿನಲ್ಲಿಯೇ ಮಲಗಿರಬಹುದು.ಇಂತಹ ಜಾಗಗಳಲ್ಲಿ ನಡೆಯುವಾಗ, ಗುಂಪಿಗೆ ಒಂದು ಮಾತು ಸಂಚಾರವಾಗುತ್ತೆ. ನೆಲಕ್ಕಿಡುವ ಹೆಜ್ಜೆಗಳು, ಯಾವುದೇ ಹಾವುಗಳನ್ನ ತುಳಿದರೂ,ಅದು ತಿರುಗಿ ಕಚ್ಚುವ ಸಂದರ್ಭಕ್ಕೆ,ನಮ್ಮ ಕಾಲ್ಗಳು ಕ್ಷಣಾರ್ಧದಲ್ಲಿ ಅಲ್ಲಿರಬಾರದು,ಅಷ್ಟು ಬಿರುಸಾಗಿ ಹೆಜ್ಜೆಗಳಾಕಿಬಿಡಬೇಕು.
ಇದು ತಂಡದ ಎಚ್ಚರಿಕೆ ಮಾತು. ದುರ್ಗಮ ಹಾದಿ, ಪ್ರಪಾತಗಳು,ಹೆಬ್ಬಂಡೆಗಳಲ್ಲಿ, ಅಪಾಯಗಳು ಸಾಕಷ್ಟು ಎದುರಾಗಿವೆ.ತಂಡ ಎಂದಿಗೂ ಎದೆಗುಂದಿಲ್ಲ. ಪ್ರತಿದಿನ ನಾವು ನೆನೆಯುವ ಕೋಡಿ ಹನುಮ,ಕೆರೆಚೌಡವ್ವ, ಆಡುಮಲ್ಲಪ್ಪ,ಗವಿ ಈರಣ್ಣ, ದವಳಪ್ಪ,ಸಂಗಣ್ಣ,ಕಾಡು ಕುಕ್ಕಡದವ್ವ,ಬಂಡೆ ಹನುಮ, ಜೋಗಿ ಗದ್ದುಗೆ, ಓಬಳದೇವರು,ಫಲ ಸಿದ್ಧರ ಆಶೀರ್ವಾದಗಳು,ಇಲ್ಲಿ ನಡೆಯುವವರೊಂದಿಗೆ ಸದಾ ಇರುತ್ತವೆಂಬ ಅಪಾರವಾದ ನಂಬಿಕೆ.
ಇಂತಹ ದಟ್ಟಾರಣ್ಯದಲ್ಲೂ ಈವರೆಗೆ, ಯಾರೊಬ್ಬರಿಗೂ ತೊಂದರೆಗಳಾಗಿಲ್ಲ.ಅದೇ ನಮ್ಮೆಲ್ಲರನ್ನ ಗಟ್ಟಿಗೊಳಿಸಿರುವ ಆತ್ಮವಿಶ್ವಾಸ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.