ಚಂದ್ರವಳ್ಳಿ ನ್ಯೂಸ್, ತುಮಕೂರು:
ಕಾಂಗ್ರೆಸ್ ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ರೀತಿಯ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗುತ್ತಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾರ್ಮಿಕವಾಗಿ ಹೇಳಿದರು.
ತುಮಕೂರಿನಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲವರು ಅನಾವಶ್ಯಕವಾಗಿ ಮಾಧ್ಯಮಗಳಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ಯಾವುದೇ ರೀತಿಯ ಚರ್ಚೆ ನಡೆಯುತ್ತಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಮುಂಬರುವ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸಲಿದ್ದು, ಅದನ್ನು ಚರ್ಚೆ ಮಾಡಲು ಸಿಎಲ್ ಪಿ ಸಭೆ ಕರೆದಿದ್ದಾರೆ. ಜಾತಿ ಜನಗಣತಿ ವರದಿ ಬಂದಿದ್ದು, ಅದನ್ನು ಮಂಡಿಸುವ ಬಗ್ಗೆಯೂ ಚರ್ಚಿಸಬಹುದು. ಆದರೆ, ಇನ್ನೂ ಸಭೆಯ ಅಜೆಂಡಾ ಬಂದಿಲ್ಲ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣಧೀರ್ ಸಿಂಗ್ ಸುರ್ಜೆವಾಲಾ ಬಂದಿದ್ದಾರೆ. ಸಭೆಗೆ ನಾನು ಕೂಡ ಹೋಗುವೆ. ಎಲ್ಲ ಶಾಸಕರು ಸಭೆಗೆ ಬರಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಡಿನ್ನರ್ ಸಭೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸದ್ಯಕ್ಕೆ ಡಿನ್ನರ್ ಸಭೆ ಮುಂದೂಡಲಾಗಿದೆ. ಸುರ್ಜೆವಾಲಾ ಅವರನ್ನು ಸಹ ಡಿನ್ನರ್ ಸಭೆಗೆ ಕರೆದಿದ್ದೇವೆ. ಹೈಕಮಾಂಡ್ಗೆ ತೊಂದರೆ ಆಗದಂತೆ ಡಿನ್ನರ್ ಸಭೆ ಮಾಡುತ್ತೇವೆ. ನ್ಯಾ.ನಾಗಮೋಹನದಾಸ್ ವರದಿಯ ಬಗ್ಗೆ ಡಿನ್ನರ್ ಸಭೆಯಲ್ಲಿ ಮಾತನಾಡಲಾಗುವುದು ಎಂದು ಪರಮೇಶ್ವರ್ ಹೇಳಿದರು.