ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ ಉಗ್ರಾಣದಲ್ಲಿ ಔಷಧಿ ಸ್ಟಾಕ್ ಇಲ್ಲ ಆಸ್ಪತ್ರೆಗಳಿಗೆ ಔಷಧಿ ಪೂರೈಕೆ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಖಾಸಗಿ ಆಸ್ಪತ್ರೆಗಳು ಕೈಗೆಟುಕದೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿ ಚಿಕಿತ್ಸೆಗಾಗಿ ಬರುವ ಬಡ ರೋಗಿಗಳಿಗೆ ಔಷಧಿ ಇಲ್ಲ ಎಂದು ಚೀಟಿ ಬರೆದುಕೊಟ್ಟು ಹೊರಗಡೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿ ಅಂದರೆ ಅವರು ಏನು ಮಾಡಬೇಕು? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಬಡವರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಯಾರಾಸಿಟಿಮೋಲ್ ನಂತಹ ಸಾಮಾನ್ಯ ಜ್ವರದ ಔಷಧಿಯೂ ಸಿಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದೀರಲ್ಲ, ನಾಚಿಕೆ ಆಗಬೇಕು ನಿಮ್ಮ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಅಶೋಕ್ ಹರಿಹಾಯ್ದಿದ್ದಾರೆ.
ನಿಮ್ಮ ಸರ್ಕಾರದಲ್ಲಿ ಯಾವುದಾದರೂ ಒಂದು ಇಲಾಖೆಯಾದರೂ ನೆಟ್ಟಗೆ ಕೆಲಸ ಮಾಡುತ್ತಿದೆಯಾ? ಒಬ್ಬ ಸಚಿವರಾದರೂ ನೆಟ್ಟಗೆ ಕೆಲಸ ಮಾಡುತ್ತಿದ್ದಾರಾ? ಕರ್ನಾಟಕದ ಜನತೆ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ ಎಂದು ಅಶೋಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.