ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಗುಂಪು ಇಲ್ಲ, ನಾನು ಮತ್ತು ಸಿಎಂ ಸಿದ್ದರಾಮಯ್ಯ ಒಗ್ಗಟ್ಟಿನಿಂದಿದ್ದು ಸಹೋದರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಂಗಳವಾರ ಸಿಎಂ ಅವರನ್ನು ಉಪಹಾರಕೂಟಕ್ಕೆ ಆಹ್ವಾನಿಸಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ.
ನೀವು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂಪಿಲ್ಲ. ನಮ್ಮ ಜೊತೆ 140 ಶಾಸಕರಿದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೆ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಈ ಬಗ್ಗೆ ಚಿಂತೆ ಬೇಡ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ದೆಹಲಿಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆಯೇ ಎನ್ನುವ ಪ್ರಶ್ನೆಗೂ, ಸರ್ವಪಕ್ಷ ಸಭೆ ಕರೆಯುವ ಕುರಿತು ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ ಎಂದು ಡಿಸಿಎಂ ತಿಳಿಸಿದರು.
ರಾಹುಲ್ ಗಾಂಧಿಗೆ ಕಿರುಕುಳ:
ಕೇಂದ್ರದ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು ರಾಜಕೀಯ ದ್ವೇಷಕ್ಕಾಗಿ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇದು ಅನ್ಯಾಯ. ಯಾರಿಗೆ ಆಗಲಿ ಕಿರುಕುಳ ನೀಡುವುದಕ್ಕೆ ಒಂದು ಮಿತಿ ಇದೆ. ಈ ಪ್ರಕರಣದಲ್ಲಿ ಕಿರುಕುಳ ನೀಡುವ ಅಗತ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಆಸ್ತಿಯಲ್ಲ.
ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಅವರು ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು. ನಾನು ಹಾಗೂ ಸಿಎಂ ಅವರೂ ಕೂಡ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದೇವೆ. ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ. ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ. ಅದೇ ರೀತಿ ನಮ್ಮ ನಾಯಕರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾರಣ, ಜವಹಾರ್ ಲಾಲ್ ನೆಹರೂ ಅವರ ಕಾಲದಿಂದ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಜವಾಬ್ದಾರಿ ಹೊತ್ತಿರುತ್ತಾರೆ ಎಂದು ಶಿವಕುಮಾರ್ ಅವರು ವಿವರಿಸಿದರು.
ಪಕ್ಷದ ಆಸ್ತಿ:
ದೇಶದಲ್ಲಿರುವ ಯಂಗ್ ಇಂಡಿಯಾ ಆಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದ ಪಾಲಕರು ಅವರಾಗಿದ್ದಾರೆ. ಇಲ್ಲಿ ಅನೇಕ ಸದಸ್ಯರು ಇದ್ದಾರೆ. ಮೊರಾರ್ಜಿ ಅವರು, ಅಹ್ಮದ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು. ಕೇಸರಿ ಅವರ ಕಾಲದಲ್ಲಿ ಪಕ್ಷ ಸಂಕಷ್ಟದ ಸಮಯದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಅವರ ಮುಂದೆ ನಾವು ಹೋಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡೆವು ಎಂದು ಶಿವಕುಮಾರ್ ತಿಳಿಸಿದರು.
ಸೋನಿಯಾ ಗಾಂಧಿ ಅವರು ನೇತೃತ್ವ ವಹಿಸಿದ ನಂತರ ಅತ್ಯುತ್ತಮ ಆರ್ಥಿಕ ತಜ್ಞರ ಮುಂದಾಳತ್ವದಲ್ಲಿ ನಮ್ಮ ಪಕ್ಷವು 10 ವರ್ಷ ಆಡಳಿತ ನಡೆಸಿದೆ. ಈಗ ರಾಜಕೀಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ. ಇತಿಹಾಸ ಮರುಕಳಿಸಲಿದೆ. ಅವರು ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ.
ಕೇಂದ್ರ ಸರ್ಕಾರದ ಈ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೇಂದ್ರಕ್ಕೆ ಹೇಳಲು ಬಯಸುತ್ತೇನೆ. ಇದು ಕೇಂದ್ರ ಸರ್ಕಾರದ ನೈತಿಕತೆಯನ್ನಷ್ಟೇ ಕುಗ್ಗಿಸಲಿದೆ ಎಂದು ಡಿಸಿಎಂ ಎಚ್ಚರಿಸಿದರು. ಚುನಾವಣೆಯಲ್ಲಿ ಹೋರಾಡೋಣ. ರಾಜಕೀಯವನ್ನು ನೇರಾನೇರವಾಗಿ ಜನರ ಮಧ್ಯೆ ಮಾಡೋಣ. ಆದರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ ಎಂದು ಶಿವಕುಮಾರ್ ತಿಳಿಸಿದರು.
ಉತ್ತರ ಪ್ರದೇಶ ಸಂಸದ ರಾಜೀವ್ ರಾಯ್ ಎಂಬುವವರು ಬೆಂಗಳೂರಿನಲ್ಲಿ ಭಾನುವಾರ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದು ತಮ್ಮ ಎಕ್ಸ್ ಖಾತೆಯಲ್ಲಿ ಸಿಎಂ ಅವರಿಗೆ ಟ್ಯಾಗ್ ಮಾಡಿ ಇದು ಅತ್ಯಂತ ಕೆಟ್ಟ ಟ್ರಾಫಿಕ್ ಜಾಮ್ ಎಂದು ಬರೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರಿಗೆ ನನ್ನನ್ನು ದೆಹಲಿಯಲ್ಲಿ ಭೇಟಿ ಮಾಡಲು ಹೇಳಿ. ದೆಹಲಿಯಲ್ಲಿರುವ ಟ್ರಾಫಿಕ್ ಸಮಸ್ಯೆ ಏನು ಎಂದು ಅವರಿಗೆ ತೋರಿಸುತ್ತೇನೆ ಎಂದು ಡಿ.ಕೆ ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಕೆಂಗಲ್ ಹನುಮಂತಯ್ಯ ಬೆಂಗಳೂರು ಅಭಿವೃದ್ಧಿಗೆ ಕಾರಣ:
ವಿಧಾನಸೌಧದ ಆವರಣದಲ್ಲಿ ಕೆಂಗಲ್ ಹನುಮಂತಯ್ಯ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಡಿಕೆ ಶಿವಕುಮಾರ್ ಅವರು ಮಾತನಾಡಿದರು.
ನಾವೆಲ್ಲರೂ ಇಂದು ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರನ್ನು ಸ್ಮರಿಸುತ್ತಿದ್ದೇವೆ. ವಿಧಾನಸೌಧ ಕಟ್ಟಿಸಿದವರು ಕೆಂಗಲ್ ಹನುಮಂತಯ್ಯ ಅವರು, ವಿಕಾಸಸೌಧ ಕಟ್ಟಿಸಿದವರು ಎಸ್.ಎಂ ಕೃಷ್ಣ ಅವರು, ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡರು. ಇವೆಲ್ಲವೂ ಈ ನಾಯಕರು ಬಿಟ್ಟು ಹೋಗಿರುವ ಸಾಕ್ಷಿಗುಡ್ಡೆಗಳು ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರು ಬದಲಿಗೆ ಅಂದು ರಾಜಧಾನಿಯನ್ನಾಗಿ ಬೇರೆ ಪ್ರದೇಶ ಆಯ್ಕೆ ಮಾಡಿದ್ದರೆ ಇಂದು ಬೆಂಗಳೂರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಲ್ಲಿರುವ ಹವಾಮಾನ ಕಂಡು ಇಡೀ ವಿಶ್ವದ ಜನ ಆಕರ್ಷಿತರಾಗುತ್ತಾರೆ. ಸಮುದ್ರದ ಪಕ್ಕದಲ್ಲಿನ ನಗರಗಳಿಗೆ ಆಗುತ್ತಿರುವ ಸಮಸ್ಯೆ ನೀವು ಗಮನಿಸಿದ್ದೀರಿ. ಬೆಂಗಳೂರು ದೇಶದಲ್ಲೇ ಅತ್ಯುತ್ತಮ ಸುರಕ್ಷಿತ ಪ್ರದೇಶ. ಇದಕ್ಕೆ ಮುನ್ನುಡಿ ಬರೆದವರು ಕೆಂಗಲ್ ಹನುಮಂತಯ್ಯನವರು. ನಮಗೆ ಅಧಿಕಾರ ಸಿಕ್ಕಾಗ ಇಂತಹ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

