ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಡಿಸಿಎಂ ಶಿವಕುಮಾರ ಅವರೇ, ನೋಡಿ ಸ್ವಾಮಿ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಅವಸ್ಥೆ. ಉದ್ಯೋಗ, ವ್ಯಾಪಾರಕ್ಕೆ ದಿನನಿತ್ಯ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗುವ ಜನಸಾಮಾನ್ಯರು ವಾಪಸ್ಸು ಬರುವ ತನಕ ಮನೆಯವರು ಜೀವ ಕೈಯಲ್ಲಿ ಹಿಡಿದುಕೊಂಡು ಭಯಪಡುವ ಪರಿಸ್ಥಿತಿ ಈಗಾಗಲೇ ಇದೆ.
ಈಗ ಬಸ್ಸು, ವ್ಯಾನುಗಳಲ್ಲಿ ಶಾಲೆಗೆ ಹೋಗುವ ಮಕ್ಕಳೂ ಸಹ ಮನೆಗೆ ಬರುವ ತನಕ ತಂದೆ ತಾಯಂದಿರು ಜೀವ ಕೈಯಲ್ಲಿ ಹಿಡಿದುಕೊಂಡು ದೇವರ ಕೈಮುಗಿಯುವ ಪರಿಸ್ಥಿತಿ ಬಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಇವತ್ತು ರಸ್ತೆ ಗುಂಡಿಗೆ ಶಾಲಾ ಬಸ್ ಬಿದ್ದು ಅದೃಷ್ಟವಶಾತ್ 20 ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಬೆಂಗಳೂರಿನ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಿ. ನಿಮ್ಮ ಸ್ಕೈ ಡೆಕ್, ಟನಲ್ ರಸ್ತೆ ಶೋಕಿ ಸ್ವಲ್ಪ ಪಕ್ಕಕ್ಕಿಡಿ. ಮೊದಲು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

