ಹೊರಗಡೆಯಿಂದ ನೀರು ತಂದು ಬಿಸಿಯೂಟ ಮಾಡಬೇಕಾದ ಪರಿಸ್ಥಿತಿ
ಎಂ.ಎಲ್ ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕುಗ್ರಾಮ ಗೌನಳ್ಳಿಯಲ್ಲಿ ಕುಡಿವ ನೀರಿಗೆ ಹಾಹಾಕಾರ ಎದ್ದಿದೆ. ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿದೆ. ಇದು ಬರಗಾಲವಲ್ಲ, ಅಂತರ್ಜಲ ಮಟ್ಟ ಕುಸಿತವೂ ಅಲ್ಲ, ವಿದ್ಯುತ್ ಸಮಸ್ಯೆಯಿಂದ ಪಂಪ್‌ಗಳು ಕೆಲಸ ಮಾಡದಿರುವ ಸಮಸ್ಯೆ ಮೊದಲೇ ಅಲ್ಲ, ಆದರೆ ನೀರು ಸರಬರಾಜಿನಲ್ಲಿ ವ್ಯತ್ಯಯದ ಕಾರಣದಿಂದ ಸಮಸ್ಯೆ ಉಲ್ಬಣವಾಗಿದೆ.
ಪರಿಣಾಮವಾಗಿ ಜನರು, ಶಾಲಾ ಬಿಸಿಯೂಟ ತಯಾರಿಗೆ ಸೇರಿದಂತೆ ಜನ ಜಾನುವಾರುಗಳಿಗೆ ಕುಡಿವ ನೀರು ದೊರೆಯದಿರುವುದರಿಂದ ಪರ್ಯಾಯಗಳಿಗಾಗಿ ಪರದಾಡುತ್ತಾರೆ. ಗ್ರಾಪಂ, ಗ್ರಾಮೀಣ ಕುಡಿಯುವ ನೀರು ಪೂರೈಕೆ ಇಲಾಖೆ ಮತ್ತು ಸರ್ಕಾರ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಾಲೂಕಿನ ಗೌನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ಕಳೆದೊಂದು ವಾರದಿಂದಲೂ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರೈತರ ಜಮೀನು ಸೇರಿದಂತೆ ಬೇರೆ ಊರು ಕೇರಿಗಳಿಂದ ನೀರು ತಂದು ಕುಡಿಯಬೇಕಾಗಿದೆ ಎಂದು ಗೌನಳ್ಳಿ ಗ್ರಾಮದ ಜನರು ದಿಢೀರ್ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಾಣಿ ವಿಲಾಸ ಸಾಗರದಿಂದ ಐಮಂಗಲ ಹೋಬಳಿಯ ವಿವಿಧ ಹಳ್ಳಿಗಳಿಗೆ ಪೂರೈಕೆಯಾಗುವ ಮುಖ್ಯ ಪೈಪ್ ಲೈನ್ ಒಡೆದು ಹಾಕಿ ಪ್ರತಿಭಟಿಸಿದ ಗ್ರಾಮಸ್ಥರು ಕುಡಿವ ನೀರು ಪೂರೈಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಗಳತೆ ದೂರದಲ್ಲೇ ವಿವಿ ಸಾಗರದ ಜಲಾಶಯವಿದ್ದರೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ದನ ಕರುಗಳಿಗೆ ಕುಡಿಯಲು ನೀರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬೇಸಿಗೆ ಕಾಲ ಬರುವುದುಕ್ಕೂ ಮುಂಚಿತವಾಗಿ ನೀರಿನ ಅಭಾವ ಉಂಟಾಗಿದೆ ಮುಂದೆ ಯಾವ ಪರಿಸ್ಥಿತಿ ಬರುತ್ತದೋ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಡಿ ಸುಧಾಕರ್ ತಾಲೂಕಿನ ಗ್ರಾಮ ಪಂಚಾಯಿತಿ ಎಲ್ಲಾ ಪಿಡಿಒಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಸ್ವಚ್ಛತೆ ಹಾಗೂ ನೀರಿನ ಸಮಸ್ಯೆ ಬರದಂತೆ ಪಂಚಾಯತಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಪಿಡಿಒಗಳಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೂ ಪಿಡಿಒಗಳ ನಿರ್ಲಕ್ಷ್ಯದಿಂದಾಗಿ ಕುಡಿವ ನೀರಿನ ಸಮಸ್ಯೆ ಜೀವಂತವಾಗಿದೆ ಎಂದು ದೂರಿದರು.
ಸಚಿವರ ಗಮನಕ್ಕೆ ತಂದಿದ್ದರೆ ಯಾವುದೋ ಮೂಲದ ಮೂಲಕ ಆ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಡಿಒ ಎಚ್ಚೆತ್ತುಕೊಳ್ಳದೆ ಇರುವುದರಿಂದ ಆ ಗ್ರಾಮದಲ್ಲಿ ನೀರಿನ ಸಮಸ್ಯೆ ದಿನ ದಿನಕ್ಕೆ ಹೇಳುತ್ತಿರದಷ್ಟು ಸಮಸ್ಯೆ ಉಲ್ಬಣವಾಗುತ್ತಿದ್ದು ಗ್ರಾಮಸ್ಥರು ಕಷ್ಟ ಅನುಭವಿಸಬೇಕಾಗಿದೆ ಎಂದು ಗ್ರಾಮದ ಜನರು ಕಿಡಿಕಾರಿದರು.
“ನೀರಿಗಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಟನೆಗೆ ಸಾಥ್ ನೀಡಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿನಿಯೊಬ್ಬರು ಮಾತನಾಡುವಾಗ ಒಂದು ವಾರದಿಂದ ನೀರಿನ ಸಮಸ್ಯೆ ಆಗಿದೆ ಎಂದು ಹೇಳುವುದನ್ನು ಬಿಟ್ಟು ಒಂದು ವಾರದಿಂದ ಶಾಲೆ ರಜಾ ಇದೆ ಎನ್ನುವ ಮಾತು ಹೇಳಿರುವುದು ತಪ್ಪಾಗಿದೆ. ಗೌನಳ್ಳಿಗೆ ನೀರು ಬಂದಿಲ್ಲ ಆದರೂ ಶಾಲೆ ನಡೆಯುತ್ತಿದೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಸದ್ಯಕ್ಕೆ ಬಿಸಿಊಟ ಅಡಿಗೆ ಮಾಡಲು ಎಸ್ ಡಿ ಎಂ ಸಿ ಅಧ್ಯಕ್ಷರು ಹೊರಗಡೆಯಿಂದ ನೀರು ತರಿಸಿ ಬಿಸಿ ಊಟ ತಯಾರಿಸಿ ವಿದ್ಯಾರ್ಥಿಗೆ ನೀಡಲಾಗುತ್ತಿದೆ. ಶಾಲೆ ಎಂದಿನಂತೆ ನಡೆಯುತ್ತದೆ ನೀರಿನ ಸಮಸ್ಯೆ ಬಗೆರಿಸುವಂತೆ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ”.
“ಗೌನಳ್ಳಿ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಬಹುಗ್ರಾಮ ಕುಡಿವ ನೀರು ಯೋಜನೆಯಲ್ಲಿ ಒಂದು ಸಬ್ ಲೈನ್ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಆ ನೀರು ಸರಾಗವಾಗಿ ಪೂರೈಕೆ ಆಗುತ್ತಿಲ್ಲ. ಹಾಗಾಗಿ ನೀರಿನ ಸಮಸ್ಯೆ ತಲೆದೊರಿದೆ. ಈ ಸಮಸ್ಯೆ ಜಿಲ್ಲಾ ಸಚಿವರು ಹಾಗೂ ಕ್ಷೇತ್ರದ ಶಾಸಕರಾದ ಸುಧಾಕರ್ ಅವರ ಗಮನಕ್ಕೂ ಇದ್ದು ಶೀಘ್ರವೇ ಸಮಸ್ಯೆ ನಿವಾರಣೆ ಆಗಲಿದೆ. ಅಲ್ಲಿಯ ತನಕ ಸಹಕರಿಸಬೇಕು”.
ಶ್ರೀನಿವಾಸ್, ಪಿಡಿಒ, ಗ್ರಾಪಂ, ಸೂರಗೊಂಡನಹಳ್ಳಿ.
“ಗೌನಹಳ್ಳಿ ನಿವಾಸಿಗಳು ಕೇಳುವ ರೀತಿಯ ಮುಖ್ಯ ಲೈನ್ ನಿಂದ ಪೂರೈಸಿದರೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ 28 ಹಳ್ಳಿಗಳಿಗೆ ನೀರು ಪೂರೈಕೆ ಕಷ್ಟ ಆಗುತ್ತದೆ. ಹಾಗಾಗಿ ಗುಡಿಹಳ್ಳಿ ಐಮಂಗಲ 2ನೇ ಹಂತದಲ್ಲಿ ಗುಡ್ಡದ ಸಮೀಪ ನೀರಿನ ಟ್ಯಾಂಕ್ ನಿರ್ಮಿಸಿ ಗೌನಹಳ್ಳಿ, ಕರ್ಲಟ್ಟಿ, ಗುಡಿಹಳ್ಳಿ ಇತರೆ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಅಲ್ಲಿಯ ತನಕ ಗ್ರಾಮಸ್ಥರು ಸಹಕರಿಸಬೇಕು”.
ಹಸನ್ ಬಾಷಾ, ಆರ್. ಎಇಇ, ಗ್ರಾಮೀಣ ಕುಡಿಯುವ ನೀರು ಉಪ ವಿಭಾಗ.

