ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಸದ್ಯ ರೂ.200 ಕೋಟಿ ಹಣವಿದೆ. ಸರ್ಕಾರ ಕಾಲ ಕಾಲಕ್ಕೆ ಆಯವ್ಯಯದಲ್ಲಿ ಅನುದಾನ ಮಂಜೂರು ಮಾಡುತ್ತಿದ್ದು, ಅನುದಾನದ ಕೊರತೆ ಇಲ್ಲ. ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾದರೆ ಮಾತ್ರ ಸರ್ಕಾರಕ್ಕೆ ಇನ್ನೂ ಹೆಚ್ಚಿನ ಅನುದಾನ ಕೇಳಲು ಅನುವಾಗುತ್ತದೆ. ನಿಗಮದಲ್ಲಿ ಅನುದಾನ ಕೊರತೆ ಇದೆ ಎನ್ನುವುದು ಊಹಾಪೋಹದ ಮಾತುಗಳಾಗಿವೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಮಗದ ಅಧ್ಯಕ್ಷ ಎಂ.ರಾಮಪ್ಪ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ, ಉದ್ಯಮಶೀಲತೆ, ಸ್ವಾವಲಂಭಿ ಸಾರಥಿ, ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಕಿರುಸಾಲ, ಗಂಗಾ ಕಲ್ಯಾಣ, ಭೂ ರಹಿತಿ ಕೃಷಿ ಕಾರ್ಮಿಕರಿಗೆ ಭೂ ಒಡೆತನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿನ ಭೋವಿ, ಒಡ್, ಒಡ್ಡ, ಒಡ್ಡರ್, ವಡ್ಡರ್, ವಡ್ಡರ, ಕಲ್ಲು ಒಡ್ಡರ, ಬೆಸ್ತರಲ್ಲದ ಭೋವಿ, ಮಣ್ಣು ವಡ್ಡರ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡಲಾಗುತ್ತಿದೆ ಎಂದು ಎಂ.ರಾಮಪ್ಪ ತಿಳಿಸಿದರು.
15 ದಿನಗಳಲ್ಲಿ ಫಲಾನುಭವಿಗಳ ಆಯ್ಕೆಗೆ ಸೂಚನೆ:
ಚಿತ್ರದುರ್ಗ ಜಿಲ್ಲೆಯಲ್ಲಿ 2022-23ನೇ ಸಾಲಿನಿಂದ ವಿವಿಧ ಯೋಜನೆಗಳಡಿ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಬಾಕಿಯಿದೆ. ಅಧಿಕಾರಿಗಳು 15 ದಿನದ ಒಳಗಾಗಿ ಸಂಬಂಧಪಟ್ಟ ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಕ್ರಮ ಕೈಗೊಳ್ಳಬೇಕು. ಫಲಾನುಭವಿಗಳ ಆಯ್ಕೆ ಬಗ್ಗೆ ನಿರ್ಲಕ್ಷ ವಹಿಸಬಾರದು. ಫಲಾನುಭವಿಗಳನ್ನು ಆಯ್ಕೆ ಮಾಡಿ ಕಲ್ಯಾಣ ತಂತ್ರಾಂಶದಲ್ಲಿ ಅಪ್‍ಲೋಡ್ ಮಾಡಬೇಕು.
ಚಿತ್ರದುರ್ಗ ಜಿಲ್ಲೆಗೆ 2025-26ನೇ ಸಾಲಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ 103 ಭೌತಿಕ ಗುರಿ ನಿಗದಿಪಡಿಸಿದ್ದು, ರೂ.1.3 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಇದೇ ಮಾದರಿಯಲ್ಲಿ ಹೈನುಗಾರಿಕೆ ಕೈಗೊಳ್ಳಲು ಉದ್ಯಮಶೀಲತಾ ಯೋಜನೆಯಡಿ ಘಟಕ ವೆಚ್ಚದ ರೂ.1.25 ಲಕ್ಷ ಸಹಾಯಧನ ನೀಡಲು 39 ಭೌತಿಕ ಗುರಿ ನಿಗದಿ ಪಡಿಸಲಾಗಿದೆ. ಇದಕ್ಕಾಗಿ ರೂ.48.75 ಲಕ್ಷ ಅನುದಾನ ಮೀಸಲಿರಿಸಲಾಗಿದೆ. ಇತರೆ ಉದ್ದಿಮೆಗಳನ್ನ ಕೈಗೊಳ್ಳಲು ಉದ್ಯಮಶೀಲತಾ ಯೋಜನೆಯಡಿ ಘಟಕ ವೆಚ್ಚದ ರೂ.2 ಲಕ್ಷ ಸಹಾಯಧನ ನೀಡಲು 29 ಭೌತಿಕ ಗುರಿ ನಿಗದಿಪಡಿಸಲಾಗಿದೆ. ಸ್ವಾವಲಂಬಿ ಸಾರಥಿ ಯೋಜನೆಯಡಿ ಟ್ಯಾಕ್ಸಿ ಖರೀದಿಗೆ ರೂ.4 ಲಕ್ಷದ ವರೆಗೆ ಸಹಾಯಧನ ನೀಡಲು 65 ಭೌತಿಕ ಗುರಿ ನಿಗದಿಪಡಿಸಲಾಗಿದೆ.
ಇದಕ್ಕಾಗಿ ರೂ.2.60 ಕೋಟಿ ನೀಡಲಾಗಿದೆ. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಕಿರು ಸಾಲ ನೀಡಲು 140 ಭೌತಿಕ ಗುರಿ ನಿಗದಿ ಪಡಿಸಲಾಗಿದ್ದು, ರೂ.70 ಲಕ್ಷ ಮೀಸಲಿರಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಲು 47 ಭೌತಿಕ ಗುರಿ ನೀಡಿದ್ದು, ರೂ.1.76 ಕೋಟಿ ಮೀಸಲಿರಿಸಲಾಗಿದೆ. ಒಟ್ಟಾರೆ ಎಲ್ಲಾ ಯೋಜನೆಗಳಿಂದ 423 ಭೌತಿ ಗುರಿ ನೀಡಿದ್ದು, ರೂ.7.16 ಕೋಟಿ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೋವಿ ಜನಾಂಗದವರು ಇದ್ದು ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಅಧ್ಯಕ್ಷ ಬಿ.ರಾಮಪ್ಪ ಹೇಳಿದರು.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ:
ನಿಗಮದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸಲು ವ್ಯಾಪಕ ಪ್ರಚಾರ ಕೈಗೊಳ್ಳಾಗುತ್ತಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲಾಗಿದೆ. ನಿಗಮದ ಯೋಜನೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗುತ್ತಿದೆ. ಆಯ್ಕೆಯಾದ ಫಲಾನುಭವಿಗಳ ಖಾತೆಗೆ ಯೋಜನೆಗಳ ಸಹಾಯಧನ ನೇರವಾಗಿ ಖಜಾನೆ-2 ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಎಲ್ಲಿಯೂ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ. ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟರೆ ನೇರವಾಗಿ ನನಗೆ ಅಥವಾ ನಿಗಮದ ವ್ಯವಸ್ಥಾಪಕರಿಗೆ ಕರೆ ಮಾಡುವಂತೆ ಅಧ್ಯಕ್ಷ ಬಿ.ರಾಮಪ್ಪ ತಿಳಿಸಿದರು.
ಜಿಲ್ಲಾ ಕೇಂದ್ರಗಳಲ್ಲಿ ನಿಗಮಕ್ಕೆ ಜಾಗ:
ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ 20,000 ಚದರ ಅಡಿ ಜಾಗವನ್ನು ಭೋವಿ ಅಭಿವೃದ್ಧಿ ನಿಗಮಕ್ಕೆ ನೀಡಲು ಒಪ್ಪಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರೆ ಜಿಲ್ಲಾ ಕೇಂದ್ರದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ನಿಗಮಕ್ಕೆ ಜಾಗ ನೀಡುವಂತೆ ಪತ್ರ ಬರೆಯಲಾವುದು. ಈ ಜಾಗದಲ್ಲಿ ಸಮುದಾಯ ಭವನ ಹಾಗೂ ನಿಗಮದ ಕಚೇರಿಗಳನ್ನು ನಿರ್ಮಾಣ ಮಾಡಲು ಚಿಂತಿಸಲಾಗಿದೆ ಎಂದು ಬಿ.ರಾಮಪ್ಪ ಹೇಳಿದರು.
ಪ್ರಾಯೋಗಿಕವಾಗಿ ಮಹಿಳಾ ಸ್ವ ಸಹಾಯ ಗುಂಪುಗಳ ರಚನೆ:
ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಭೋವಿ ಕಾಲೋನಿಗಳಲ್ಲಿನ ಮಹಿಳೆಯರನ್ನು ಒಗ್ಗೂಡಿಸಿ ಸ್ವ ಸಹಾಯ ಗುಂಪುಗಳನ್ನು ರಚಿಸಲು ಯೋಜನೆ ರೂಪಿಸಲಾಗಿದೆ. 10 ಜನರು ಇರುವ ಸ್ವ ಸಹಾಯ ಗುಂಪುಗಳಿಗೆ ಪ್ರೇರಣಾ ಯೋಜನೆಯಡಿ ಕಿರುಸಾಲ ನೀಡಲಾಗುವುದು. ಈ ಸ್ವ ಸಹಾಯ ಗುಂಪುಗಳನ್ನು ಎನ್.ಆರ್.ಎಲ್.ಎಂ ಅಡಿ ಸಹ ನೊಂದಣಿ ಮಾಡಿ ಬ್ಯಾಂಕುಗಳೊಂದಿಗೆ ಸಂಯೋಜಿಸಲಾಗುವುದು. ಬ್ಯಾಂಕುಗಳು ಸಿಬಿಲ್ ಸ್ಕೋರ್ ಕಾರಣದಿಂದ ಫಲಾನುಭವಿಗಳ ಆಯ್ಕೆಯನ್ನು ತಿರಸ್ಕರಿಸಿದರೆ ಕೂಡಲೇ ಬೇರೆ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಭೌತಿಕ ಹಾಗೂ ಆರ್ಥಿಕ ಗುರಿ ಸಾಧಿಸದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದಾಗಿ ಕರ್ನಾಟಕ ಭೋವಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರಾನಾಯ್ಕ್ ಸಭೆಯಲ್ಲಿ ಹೇಳಿದರು.
ಸಭೆಯಲ್ಲಿ ನಿಗಮದ ಯೋಜನೆಗಳ ಅನುಷ್ಠಾನದಲ್ಲಿನ ತೊಂದರೆ ಹಾಗೂ ಸಮಸ್ಯೆಗಳ ಕುರಿತು ಫಲಾನುಭವಿಗಳೊಂದಿಗೆ ಅಧ್ಯಕ್ಷ ಬಿ.ರಾಮಪ್ಪ ಸಂವಾದ ನಡೆಸಿದರು. ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಸಂವಿಧಾನದ ಪೀಠಿಕೆಯನ್ನು ಇದೇ ಸಂದರ್ಭದಲ್ಲಿ ಬೋಧಿಸಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್, ಚಿತ್ರದುರ್ಗ ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಚಿಕ್ಕಂದವಾಡಿ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಇದ್ದರು.

