ಶೋಷಿತ ಜಾತಿಗಳು ಆರ್ಥಿಕ ಸ್ವಾವಲಂಬಿಗಳಾಗಲು ತುರ್ತು ಚಳುವಳಿಯ ಅನಿವಾರ್ಯತೆಯಿದೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ರಸ್ತುತ ದಿನಮಾನದಲ್ಲಿ ಶೋಷಿತ ಜಾತಿಗಳು ತಮ್ಮ ಸಮಾಜವನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಚಳುವಳಿ ಆರಂಭಿಸುವ ಅನಿವಾರ್ಯತೆ ತುರ್ತಾಗಿದೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬುದ್ದ ವಿಹಾರ ಕೇಂದ್ರದಲ್ಲಿ ಬುಧವಾರ ಡಾ.ಬಿ.ಆರ್.ಅಂಬೇಡ್ಕರ್‌ ಪರಿಶಿಷ್ಟ ಜಾತಿ ಹೈನುಗಾರಿಕೆ ಅಭಿವೃದ್ಧಿ ಹಾಗೂ ಉತ್ಪಾದಕರ ಸಹಕಾರ ಸಂಘ ನಿಯಮಿತ ಚಿತ್ರದುರ್ಗದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರಿಶಿಷ್ಟ ಜಾತಿಯಲ್ಲಿನ ಆರ್ಥಿಕ ಅಶಕ್ತರು ಹಾಗೂ ನಿರುದ್ಯೋಗಿಗಳು ಸ್ವ-ಉದ್ಯೋಗ ಆರಂಭಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಸ್ವಾಭಿಮಾನದಿಂದ ವೈಚಾರಿಕತೆಯುಳ್ಳ ಸಹಕಾರ ಮಾರ್ಗದಲ್ಲಿ ಸಾಮರಸ್ಯದ ಜೀವನ ನಡೆಸುವಂತೆ ಪ್ರೇರೇಪಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗಳಪಟ್ಟು ಈ ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಮುಖ್ಯ ಪ್ರವರ್ತಕರ ಜತೆಗೆ ೨೧ಜನ ಪ್ರವರ್ತಕರಿದ್ದಾರೆ ಎಂದರು.

ಈ ಸಹಕಾರಿ ಸಂಘದ ಷೇರುದಾರರಿಗೆ ಸಾಲ/ಸಹಾಯ ಧನ ದೊರಕಿಸಿ ಕೊಡುವ ಮೂಲಕ ಕಡಿಮೆ ಬಂಡವಾಳದಲ್ಲಿ ಸ್ವಂತ ಜಮೀನು ಇರುವವರು ಅಥವಾ ಇಲ್ಲದಿರುವವರು(ಭೂಮಿ ಹೊಂದಲು ಪರ್ಯಾಯ ವ್ಯವಸ್ಥೆಯೊಂದಿಗೆ) ಬೋರ್ವೆಲ್ ಕೊರೆಯಿಸಿಕೊಂಡು ಮೇವು ಬೆಳೆಯುವುದರೊಂದಿಗೆ ನಮ್ಮ ಊರು ಮತ್ತು ಮನೆಗಳಲ್ಲಿಯೇ ಹಸುಸಾಕಾಣಿಕೆ ಮಾಡುವುದರಿಂದ ಸ್ವ-ಉದ್ಯೋಗ ಹೊಂದಿ ಆರ್ಥಿಕ ಸ್ವಾಲಂಬನೆ ಸಾಧಿಸಬಹುದೆಂಬ ಆಶಯ ಹೊಂದಲಾಗಿದೆ ಎಂದರು.

ಸಂಘದ ಸದಸ್ಯರಾಗಲು ಷೇರು ಮೊತ್ತ ೧ ಸಾವಿರ ರೂ. ಹಾಗೂ ಪ್ರವೇಶ ಶುಲ್ಕ ೧೦೦ ರೂ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಬಿ.ಪಿ.ತಿಪ್ಪೇಸ್ವಾಮಿ, ಮುಖ್ಯ ಪ್ರವರ್ತಕರು, ೯೯೦೦೫೯೨೪೭೩ ಸಂಪರ್ಕಿಸಲು ಕೋರಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ ಪ್ರೇಮನಾಥ್ ಶೇರು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು. ಸಹಕಾರಿ ಸಂಘದ ಪ್ರವರ್ತಕರುಗಳಾದ ಕೆ.ಆರ್.ಮದ್ದಪ್ಪ, ಬಿಜಿಕೆರೆ ಬಸವರಾಜ್, ಟಿ.ಮೂರ್ತಿ, ನನ್ನಿವಾಳ ರವಿಕುಮಾರ್, ಹುಚ್ಚವ್ವನಳ್ಳಿ ವೆಂಕಟೇಶ್, ತುರುವನೂರು ಜಗನ್ನಾಥ್, ಬಿ.ಎಸ್. ಯೋಗರಾಜ್, ವೈಶಾಲಿ, ಉಷಾ, ಬುರುಜನರೊಪ್ಪ ಭಾರತಿ, ಶಿಲ್ಪ, ಮಠದಹಟ್ಟಿ ವೆಂಕಟೇಶ್, ಅಶ್ವಥ್, ಧನುಷ್ ಜಗನ್ ಮತ್ತಿತರರು ಇದ್ದರು.

 

Share This Article
error: Content is protected !!
";