ಜಾತಿ ಗಣತಿ ವಿಷಯ ಚರ್ಚೆ ಸಂದರ್ಭದಲ್ಲಿ ಸಂಘರ್ಷ ನಡೆದಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಜಾತಿ ಗಣತಿ ವರದಿ ಜಾರಿಯಿಂದ ದೊಡ್ಡ ಸಮಾಜಗಳಿಗೆ ತೊಂದರೆ ಆಗಬಾರದು. ಸಣ್ಣ ಸಮಾಜಗಳಿಗೆ ಅನ್ಯಾಯ ಆಗಬಾರದು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಬಗ್ಗೆ ಆರೋಗ್ಯಕರ ಚರ್ಚೆ ಆಗಿದೆ. ಅದು ಅರ್ಧ ಚರ್ಚೆಯಾಗಿದ್ದು, ಅಪೂರ್ಣವಾಗಿದೆ. ಆ ಚರ್ಚೆ ಮುಂದುವರಿಯುತ್ತದೆ. ಸಂಪುಟದಲ್ಲಿ ಪೂರ್ಣ ಪ್ರಮಾಣದ ಚರ್ಚೆ ಬಳಿಕ ಪ್ರತಿಕ್ರಿಯಿಸುತ್ತೇನೆ ಎಂದು ಸಚಿವೆ ತಿಳಿಸಿದರು.

ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಕುರಿತು ಚರ್ಚೆ ಸಂದರ್ಭದಲ್ಲಿ ಯಾರೂ ವಿರೋಧ ಮಾಡಿಲ್ಲ. ಖುದ್ದು ನಾವು ಕ್ಯಾಬಿನೆಟ್​ನಲ್ಲಿ ಇದ್ದಾಗ, ಚರ್ಚೆ ಆಗಿದೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಚರ್ಚೆಯಲ್ಲಿ ಎಲ್ಲರೂ ಭಾಗವಹಿಸಿದ್ದರು. ಮತ್ತೆ ಕ್ಯಾಬಿನೆಟ್​ನಲ್ಲಿ ಚರ್ಚೆಯಾದ ಬಳಿಕ ರಾಜ್ಯದ ಜನತೆಗೆ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ ಎಂದು ತಿಳಿಸಿದರು.

ಎಂ.ಬಿ.ಪಾಟೀಲ ಮತ್ತು ಶಿವಾನಂದ ಪಾಟೀಲ್ ನಡುವೆ ವಾಗ್ವಾದ ನಡೆಯಿತು ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಖಂಡಿತ ಆ ರೀತಿ ನಡೆದಿಲ್ಲ. ನಿರ್ದಿಷ್ಟವಾಗಿ ಜಾತಿ ಗಣತಿ ವರದಿ ವಿಚಾರದಲ್ಲಿ ಅವರ ಮಧ್ಯ ವಾದ ವಿವಾದ ನಡೆದಿಲ್ಲ ಎಂದರು‌.

ಲಿಂಗಾಯತ, ಒಕ್ಕಲಿಗರನ್ನು ಕಡಿಮೆ ತೋರಿಸಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಅಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಾವೆಲ್ಲಾ ಸಾಕ್ಷಿಯಾಗಿದ್ದೇವೆ. ಸುಳ್ಳು ಮಾತನಾಡಲು ನನಗೆ ಬರುವುದೇ ಇಲ್ಲ. ಉಪಹಾಪೋಹಗಳಿಗೆ ಎಡೆ ಮಾಡಿಕೊಡುವುದು ಬೇಡ. ಈ ರೀತಿ ಅಂದು ಚರ್ಚೆ ಆಗಿಲ್ಲ.

ಎಲ್ಲ ವಿಚಾರಗಳನ್ನು ಬೇರೆ ಬೇರೆ ಆಯಾಮದಲ್ಲಿ ಚರ್ಚಿಸಿದ್ದೇವೆ. ಯಾವುದೇ ಸಮುದಾಯಕ್ಕೆ ಅನ್ಯಾಯ, ತೊಂದರೆ ಆಗಬಾರದು. ಪಕ್ಷಕ್ಕೂ ಹಾನಿ ಉಂಟಾಗಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸಮಗ್ರವಾಗಿ ಚರ್ಚೆಯಾಗಿದೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ಮುಂದುವರಿದ ಸಮಾಜಕ್ಕೆ ಅನ್ಯಾಯ ಆಗಬಾರದು. ಅದೇ ರೀತಿ ಹಿಂದುಳಿದ ಸಮಾಜಕ್ಕೆ ನ್ಯಾಯ ದೊರಕಿಸಿ ಕೊಡಬೇಕು ಎನ್ನುವುದೇ ನಮ್ಮ ಕಾಂಗ್ರೆಸ್ ಪಕ್ಷದ ಪರಿಕಲ್ಪನೆ ಎಂದು ಅವರು ತಿಳಿಸಿದರು.

ಜಾತಿ ಗಣತಿ ಸಮೀಕ್ಷೆಯನ್ನೇ ಮಾಡಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್​ ಹೆಗಡೆ ಅವರು ಸೇರಿದಂತೆ ಸದಸ್ಯರನ್ನು ನೇಮಕ ಮಾಡಿದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ. ಜಾತಿ ಗಣತಿ ವರದಿ ಅಧ್ಯಯನ ಮಾಡಿದ್ದು ಕೂಡ ಬಿಜೆಪಿ ಸರ್ಕಾರವೇ.

ಆ ಸಂದರ್ಭದಲ್ಲಿ ವರದಿ ತೆಗೆದುಕೊಂಡು ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ತಿರಸ್ಕರಿಸಬಹುದಿತ್ತಿಲ್ಲವೇ? ಸುಮ್ಮನೇ ಅವೈಜ್ಞಾನಿಕ ಎಂದರೆ ಹೇಗೆ? ಏನಾದರೂ ಲೋಪದೋಷಗಳು ಇದ್ದರೆ ಅವರ ಆರೋಪವನ್ನು ಒಪ್ಪಿಕೊಳ್ಳೋಣ ಎನ್ನುವ ಮೂಲಕ ಬಿಜೆಪಿ ನಾಯಕರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ಕೊಟ್ಟರು.

Share This Article
error: Content is protected !!
";