ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಸಾರಿಗೆ ಸಂಸ್ಥೆಯ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ. ಅವತ್ತು ಬಸ್ನಲ್ಲಿ ಒಬ್ಬರು – ಇಬ್ಬರು ಇರಲಿಲ್ಲ. 90 ಜನ ಪ್ರಯಾಣಿಸುತ್ತಿದ್ದರು. ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಂಡಕ್ಟರ್ ಮಹಾದೇವ ಕಳೆದ ಐದು ವರ್ಷಗಳಿಂದ ಅದೇ ರೂಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವತ್ತು ಇಬ್ಬರು ಹುಡುಗ – ಹುಡುಗಿ ಬಸ್ನಲ್ಲಿ ಹತ್ತಿದ್ದರು. ಇಬ್ಬರೂ ಅಪ್ರಾಪ್ತರು. ಹುಡುಗ ಕೂಡ ಜಿರೋ ಟಿಕೆಟ್ ತೆಗೆದುಕೊಂಡು ಪ್ರಯಾಣಿಸಿದ್ದಾರೆ. ಆಗ ಕಂಡಕ್ಟರ್ ಕನ್ನಡದಲ್ಲಿ ಕೇಳಿದ್ದಾರೆ. ಅವರು ಮರಾಠಿಯಲ್ಲಿ ಮಾತನಾಡಿದ್ದಾರೆ. ಕಂಡಕ್ಟರ್ಗೆ ಮರಾಠಿ ಬರುವುದಿಲ್ಲ. ಅವರಿಗೆ ಕನ್ನಡ ಬರುವುದಿಲ್ಲವಂತೆ. ಹೀಗೆ ಮಾತಿಗೆ ಮಾತು ಬೆಳೆದಿದೆ. ಫೋನ್ ಮಾಡಿ ಮುಂದಿನ ನಿಲ್ದಾಣದಲ್ಲಿ ಅವರ ಕಡೆಯವರನ್ನು ಕರೆಸಿ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಿವರಿಸಿದರು.
ಪೋಕ್ಸೋ ಕೇಸ್: ಮಧ್ಯಾಹ್ನ 1 ಗಂಟೆಗೆ ಬಾಳೇಕುಂದ್ರಿ ಬಳಿ ಘಟನೆ ನಡೆದಿದೆ. ಆಮೇಲೆ ನಮ್ಮ ಇಲಾಖೆಯವರು ದೂರು ಕೊಟ್ಟ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೂ ಅವರನ್ನು ಒಪ್ಪಿಸಿದ್ದಾರೆ. ಮಾರನೇ ದಿನ ಕಂಡಕ್ಟರ್ ಮೇಲೆ ಬೇಕು ಅಂತಾನೇ ಪೋಕ್ಸೋ ಕೇಸ್ ಕೊಟ್ಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕನ್ನಡ ಕಲಿಯಬೇಕು:
ಟಿ.ಎ. ನಾರಾಯಣಗೌಡರು ಮಂಗಳವಾರ ಬೆಳಗಾವಿಗೆ ಬಂದು ಪ್ರತಿಭಟನೆ ನಡೆಸುವ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವರು “ಬಸ್ನಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತವೆ. ಆದರೆ, ಇದು ಭಾಷೆ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಆದ್ದರಿಂದ ರಕ್ಷಣಾ ವೇದಿಕೆ ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಅವರು ಬೇಕಾದಷ್ಟು ಮಾತೃ ಭಾಷೆ ಮಾತನಾಡಲಿ. ಆದರೆ, ನಮ್ಮ ಆಡಳಿತ ಭಾಷೆ ಕನ್ನಡ. ಹಾಗಾಗಿ, ಅಗತ್ಯವಾಗಿ ಎಲ್ಲರೂ ಕನ್ನಡ ಕಲಿಯಬೇಕು ಎಂದು ಸಚಿವರು ತಿಳಿಸಿದರು.
ಗಡಿ ಭಾಗ ನಿರ್ಲಕ್ಷ್ಯ ಇಲ್ಲ: ರಾಜ್ಯದ ಗಡಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿಲ್ಲ. ನಮ್ಮ ಗಡಿ ನಮ್ಮದು, ಅವರ ಗಡಿ ಅವರದಷ್ಟೇ. ನಾನು ಕಂಡಕ್ಟರ್ ಮೇಲಿನ ಹಲ್ಲೆ ಘಟನೆ ಬಗ್ಗೆ ಮಾತನಾಡಿದ್ದೇನೆ. ಇಲ್ಲಿಯ ರಾಜಕಾರಣಿಗಳನ್ನು ನೀವು ಕೇಳಿಲ್ಲ. ಹಾಗಾಗಿ, ಅವರು ಮಾತನಾಡಿಲ್ಲ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಮಹಾರಾಷ್ಟ್ರ ಅಧಿಕಾರಿಗಳ ಜೊತೆಗೆ ಮಾತನಾಡುವಂತೆ ನಮ್ಮ ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದ ಅವರಿಗೆ ತಿಳಿಸಿದ್ದೇನೆ. ಅದೇ ರೀತಿ ಮೊನ್ನೆ ಮಹಾರಾಷ್ಟ್ರ ಸಚಿವರು ಬೆಂಗಳೂರಿಗೆ ಬಂದಿದ್ದರು. ನೋಡೋಣ ಇವತ್ತು ಮಹಾರಾಷ್ಟ್ರಕ್ಕೆ ಬಸ್ ಬಿಡುವ ಬಗ್ಗೆ ಮಾತನಾಡುತ್ತೇನೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಜೆಪಿಯಲ್ಲೇ ಭ್ರಷ್ಟರು ಹೆಚ್ಚು: ಕಾಂಗ್ರೆಸ್ ಪಕ್ಷದಲ್ಲಿ ಭ್ರಷ್ಟರು, ಕೊಲೆಗಡುಕರಿಗೆ ರಕ್ಷಣೆ ಇದೆ ಎಂಬ ಸಿ.ಟಿ.ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಭ್ರಷ್ಟರು, ಕೊಲೆಗಡುಕರು ಬಿಜೆಪಿ ಪಕ್ಷದಲ್ಲೆ ಹೆಚ್ಚು ಇದ್ದಾರಲ್ಲ. ಅವರಿಗೆ ಬೆಂಬಲಿಸುವುದು ಬಿಜೆಪಿಯವರು. ನಮ್ಮ ಪಕ್ಷದಲ್ಲಿ ಯಾರೂ ಅಂತವರಿಲ್ಲ. ನಮ್ಮಲ್ಲಿ ಸಚ್ಚಾರಿತ್ರ್ಯವುಳ್ಳವರಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.