ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿನ್ನಾಭರಣ ಅಂಗಡಿಗೆ ಚಿನ್ನ ಖರೀದಿ ನೆಪದಲ್ಲಿ ಬಂದು, ಪಿಸ್ತೂಲ್ ತೋರಿಸಿ 30 ಗ್ರಾಂ ಚಿನ್ನಾಭರಣ ಹಾಗೂ 50 ಸಾವಿರ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಪುರದ ರಾಮದೇವ್ ಜ್ಯುವೆಲ್ಲರಿ ಶಾಪ್ನಲ್ಲಿ ನಡೆದಿದೆ. ಎರಡು ಬೈಕ್ ಗಳಲ್ಲಿ ಮೂವರು ಆರೋಪಿಗಳು ಮಂಗಳವಾರ ಸಂಜೆ 5:30ರ ಸುಮಾರಿಗೆ ಬಂದಿದ್ದಾರೆ. ಮೊದಲು ಇಬ್ಬರು ಜ್ಯುವೆಲ್ಲರಿ ಶಾಪ್‌ನೊಳಗೆ ಪ್ರವೇಶಿಸಿದ್ದಾರೆ.
ಇನ್ನೋರ್ವ ಹೊರಗಿದ್ದ. ಶಾಪ್ಗೆ ಬಂದವರು ಕಿವಿ ಓಲೆ ತೋರಿಸಿ, ಇಂಥದ್ದೇ ಡಿಸೈನ್ ಬೇಕು ಎಂದೆಲ್ಲಾ ಹೇಳಿದ್ದಾರೆ. ಜ್ಯುವೆಲ್ಲರಿ ಶಾಪ್ ಮಾಲೀಕರ ಮಕ್ಕಳಾದ ವಿಷ್ಣು ಮತ್ತು ಗೌತಮ್ ಅಂಥ ಡಿಸೈನ್ ನಮ್ಮ ಬಳಿ ಇಲ್ಲ ಎಂದಿದ್ದಾರೆ. ಈ ವೇಳೆ ಒಬ್ಬ ಪಿಸ್ತೂಲ್ ತೋರಿಸಿ ಬೆದರಿಸಿದ್ದಾನೆ. ತಕ್ಷಣ ಹೊರಗಿದ್ದ ಆರೋಪಿ ಬಂದು ಚಿನ್ನಾಭರಣ ಮತ್ತು ನಗದು ಹಣವನ್ನು ಬ್ಯಾಗ್ನಲ್ಲಿ ತುಂಬಿಸಿಕೊಂಡಿದ್ದಾರೆ.
ಇದರಿಂದ ಆತಂಕಗೊಂಡು ಮಕ್ಕಳು ಕಿರುಚಿಕೊಂಡಿದ್ದಾರೆ. ಓರ್ವ ಆರೋಪಿ ಬಾಲಕನ ಮುಖ, ಕೈಗೆ ಹೊಡೆದು ಹಲ್ಲೆ ಮಾಡಿದ್ದಾನೆ. ಮಹಿಳೆಯರ ಗುಂಪು ಶಾಪ್ನತ್ತ ಬರುವುದನ್ನು ಗಮನಿಸಿದ ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ.
ಮಾಲೀಕರಾದ ಮಾಣಿಕ್ ರಾಮ್ ಅವರು ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಉತ್ತರ ಪಶ್ಚಿಮ ವಿಭಾಗದ ಡಿಸಿಪಿ ಡಿ.ಎಲ್.ನಾಗೇಶ್ ಪ್ರತಿಕ್ರಿಯಿಸಿ, ಆರೋಪಿಗಳು ಬಳಸಿರುವ ಪಿಸ್ತೂಲ್ ನಿಜವಾದುದೋ ಅಥವಾ ನಕಲಿಯೋ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆಯಾಗಿದ್ದು ಆದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

