ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ಮಹಿಳೆಯೊಬ್ಬರು ಎಂದಿನಂತೆ ಬೆಳಗ್ಗೆ ಮನೆ ಮುಂದೆ ಕಸ ಗುಡಿಸುವಾಗ ಬೈಕ್ನಲ್ಲಿ ಬಂದ ಸರಗಳ್ಳರು ಮಹಿಳೆಯ ಮುಖಕ್ಕೆ ಕೆಮಿಕಲ್ ಸ್ಪ್ರೇ ಮಾಡಿದ ಕಳ್ಳರು ಮಹಿಳೆಯ ಕೊರಳಲ್ಲಿದ್ದ 70 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಳವು ಮಾಡುವಾಗ ಸರಗಳ್ಳರು ಮಹಿಳೆಯ ಮುಖಕ್ಕೆ ಸ್ಪ್ರೇ ಸಿಂಪಡಿಸಿದ ಪರಿಣಾಮ ಆಕೆ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನೆಲಮಂಗಲ ಬಳಿಯ ಹುಸ್ಕೂರು ಗ್ರಾಮದಲ್ಲಿ ಬೆಳಗ್ಗೆ ನಡೆದಿದೆ.
ಈ ದುರ್ಘಟನೆಯಿಂದ ಜ್ಯೋತಿ (45) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೂಡಲೇ ಮಹಿಳೆಯನ್ನು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷೆಯ ಬಳಿಕ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

