ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿಯಮಿತದ ಚುನಾವಣೆ ನಡೆದಿದ್ದು, ಅಧ್ಯಕ್ಷರ ಆಯ್ಕೆಗೆ ಜೂನ್೭ರ ಶನಿವಾರ ಬ್ಯಾಂಕ್ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಕೆ.ಸಿ.ನಾಗರಾಜರವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.
ಕೆ.ಸಿ.ನಾಗರಾಜು ಇದೇ ಮೊದಲಬಾರಿಗೆ ಸ್ಪರ್ಧಿಸಿ ಅವಿರೋಧ ಆಯ್ಕೆಯಾಗಿದ್ದು, ಎಲ್ಲಾ ನಿರ್ದೇಶಕರ ವಿಶ್ವಾಸ ಪಡೆದು ಅಧ್ಯಕ್ಷರಾಗಿ ಆಯ್ಕೆಗೊಂಡರು. ಕೆ.ಸಿ.ನಾಗರಾಜ ಕಿರಿಯ ಸಹೋದರ ಕೆ.ಸಿ.ವೀರೇಂದ್ರ(ಪಪ್ಪಿ) ಸಹ ಕಳೆದ ಅವಧಿಯಲ್ಲಿ ಬ್ಯಾಂಕ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.
ಪ್ರಸ್ತುತ ಬ್ಯಾಂಕ್‌ನಲ್ಲಿ ೧೫ ಸ್ಥಾನಗಳಿದ್ದು, ಒಂದು ಸ್ಥಾನ ಮಾತ್ರ ಸರ್ಕಾರಿ ನಾಮನಿರ್ದೇಶವಾಗಿದ್ದು ಉಳಿದ ಎಲ್ಲಾ ೧೪ ಸ್ಥಾನಗಳು ಚುನಾವಣೆ ಮೂಲಕ ಆಯ್ಕೆಗೊಂಡಿದ್ದವು. ಅಧ್ಯಕ್ಷರಾಗಿ ಕೆ.ಸಿ.ನಾಗರಾಜು, ಉಪಾಧ್ಯಕ್ಷರಾಗಿ ಚನ್ನಗಾನಹಳ್ಳಿಯ ತಿಪ್ಪಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಉಳಿದಂತೆ ನಿರ್ದೇಶಕರಾಗಿ ಕ್ಯಾದಿಗುಂಟೆ ಕೆ.ಜಲ್ದೀರಪ್ಪ, ಬುಕ್ಕಾಂಬೂದಿ ಎನ್.ಮಂಜುನಾಥ, ಭರಮಸಾಗರ ಬಿ.ವೀರಭದ್ರಪ್ಪ, ಚಿಗತನಹಳ್ಳಿ ಸಿ.ಎಲ್.ಸತೀಶ್‌ಬಾಬು, ಕುರುಡಿಹಳ್ಳಿ ಸಿ.ಎ.ಪ್ರಶಾಂತ್, ಗೊರ್‍ಲತ್ತು ಮಹದೇವಮ್ಮ, ಮೈಲನಹಳ್ಳಿ ಓಬಳಮ್ಮ, ತಳಕು ಟಿಎಟಿ ಕುಮಾರ್, ನೇರ್‍ಲಗುಂಟೆ ಚಂದ್ರಣ್ಣ, ಅಬ್ಬೇನಹಳ್ಳಿ ಬಿ.ನಾಗರಾಜು, ನರಹರಿ ನಗರದ ಬಿ.ಸಿ.ಸತೀಶ್‌ಕುಮಾರ್, ಹಾಲಿಗೊಂಡನಹಳ್ಳಿ ಪುಟ್ಟೀರಮ್ಮ ನಿರ್ದೇಶಕರಾಗಿ ಆಯ್ಕೆಯಾಗಿದ್ಧಾರೆ.
ನೂತನ ಅಧ್ಯಕ್ಷ ಕೆ.ಸಿ.ನಾಗರಾಜು ಪತ್ರಿಕೆಯೊಂದಿಗೆ ಮಾತನಾಡಿ, ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ತನ್ನದೇಯಾದ ಇತಿಹಾಸ ಹೊಂದಿದೆ. ಸಹಕಾರಿ ದುರೀಣ ದಿವಂಗತ ಬಿ.ಎಲ್.ಗೌಡ, ಕುರುಡಿಹಳ್ಳಿಯ ತಿಮ್ಮಾರೆಡ್ಡಿಯಂತಹ ಹಿರಿಯ ನಾಯಕರು ಬ್ಯಾಂಕ್‌ನ ಅಭಿವೃದ್ದಿಗೆ ಶ್ರಮಿಸಿದ್ಧಾರೆ.
ತಾಲ್ಲೂಕಿನಾದ್ಯಂತ ರೈತರ ಸಮುದಾಯಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಇಲಾಖೆ ಮತ್ತು ಸರ್ಕಾರದಿಂದ ಮಾರ್ಗದರ್ಶನ ಪಡೆದು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು. ಬ್ಯಾಂಕ್‌ನ ಎಲ್ಲಾ ನಿರ್ದೇಶಕರು ಸೇರಿ ನನಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಇದನ್ನು ಸಾರ್ವಜನಿಕವಾಗಿ ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಬ್ಯಾಂಕ್ ಅಭಿವೃದ್ದಿಗೆ ಶ್ರಮಿಸುವ ಭರವಸೆ ನೀಡಿದರು. ವ್ಯವಸ್ಥಾಪಕ ಪ್ರಭು ಇದ್ದರು.