ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾದ ತುರುವನೂರು ಆಂಜನೇಯಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಎಂ ಸ್ಯಾಂಡ್ ಬಳಸಿ ವಿಶ್ವದಲ್ಲಿಯೇ ಅತಿ ದೊಡ್ಡದಾದ ಆಂಜನೇಯಸ್ವಾಮಿಯ ರೇಖಾ ಚಿತ್ರ ಬಿಡಿಸಿರುವುದು ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದು
, ಮೆಡಲ್ ಹಾಗೂ ಸರ್ಟಿಫಿಕೆಟ್ ಸಿಕ್ಕಿದೆ ಎಂದು ಸಾಯಿ ಕ್ಯಾಡ್ ಕಂಪನಿ ಮುಖ್ಯಸ್ಥ ಮಂಜುನಾಥ ರೆಡ್ಡಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುರುವನೂರು ಗ್ರಾಮದಲ್ಲಿ ಸಂಗಟಿ ಹನುಮಂತಪ್ಪನವರಿಗೆ ಸೇರಿದ ಐದು ಎಕರೆ ಜಮೀನಿನಲ್ಲಿ ಒಂದು ವಾರಗಳ ಕಾಲ ಶ್ರಮಪಟ್ಟು ಎಂ ಸ್ಯಾಂಡ್ ಬಳಸಿ ಆಂಜನೇಯಸ್ವಾಮಿ ರೇಖಾಚಿತ್ರವನ್ನು ಬಿಡಿಸಿದ್ದೇವೆ. ಇದಕ್ಕೆ ಜನಾರ್ಧನ್ ಹಾಗೂ ಮೋಹನ್ ಇವರುಗಳು ನನ್ನ ಜೊತೆ ಕೈಜೋಡಿಸಿದರು.

ಇಷ್ಟು ದೊಡ್ಡದಾದ ರೇಖಾಚಿತ್ರವನ್ನು ಇದುವರೆವಿಗೂ ಇಡೀ ವಿಶ್ವದಲ್ಲಿ ಯಾರೂ ಬಿಡಿಸಿರಲಿಲ್ಲ. ಮೊದಲು ತರಕಾರಿಯಿಂದ ಆಂಜನೇಯಸ್ವಾಮಿಯ ರೇಖಾ ಚಿತ್ರ ಬಿಡಿಸಬೇಕೆಂದುಕೊಂಡಿದ್ದೆವು. ಅಷ್ಟೊಂದು ಪ್ರಮಾಣದಲ್ಲಿ ತರಕಾರಿಯನ್ನು ಹೊಂದಿಸುವುದು ಕಷ್ಟವಾಗುತ್ತದೆನ್ನುವ ಕಾರಣಕ್ಕೆ ಎಂ ಸ್ಯಾಂಡ್‌ ಮತ್ತು ಎಲ್ಇಡಿ ಲೈಟ್ ಬಳಸಿ ಸಿದ್ದಪಡಿಸಿರುವ ರೇಖಾಚಿತ್ರವನ್ನು ಸಹಸ್ರಾರು ಭಕ್ತರು ವೀಕ್ಷಿಸಿ ಇಷ್ಟಪಟ್ಟಿದ್ದಾರೆಂದು ಮಂಜುನಾಥರೆಡ್ಡಿ ಹರ್ಷ ವ್ಯಕ್ತಪಡಿಸಿದರು.

ತುರುವನೂರಿನ ಆಂಜನೇಯಸ್ವಾಮಿ ದೇವರ ಜಾತ್ರೆ ಸಂದರ್ಭದಲ್ಲಿ ನಾವು ದೇವರ ಸೇವೆ ಅಂದುಕೊಂಡು ಬಿಡಿಸಿರುವ ಇಷ್ಟೊಂದು ದೊಡ್ಡ ಗಾತ್ರದ ಆಂಜನೇಯಸ್ವಾಮಿ ರೇಖಾಚಿತ್ರಕ್ಕೆ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದೊರಕಿರುವುದು ನಮಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಎಂದು ಸಂಭ್ರಮಿಸಿದರು.

ಮುಂಬರುವ ವರ್ಷದಲ್ಲಿ ಇಂಥದ್ದೇ ಸಾಧನೆ ಮಾಡುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಎಂ ಸ್ಯಾಂಡ್ ಮತ್ತು ಎಲ್ಇಡಿ ಲೈಟ್ ಬಳಸಿ ಸುಮಾರು ಐದು ಎಕರೆ ಜಾಗದಲ್ಲಿ ರಚಿಸಲಾಗಿರುವ ಬೃಹತ್ ಆಂಜನೇಯಸ್ವಾಮಿ ರೇಖಾ ಚಿತ್ರಕ್ಕೆ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಿಗಲು ಪ್ರಮುಖವಾಗಿ ಇಡೀ ತುರುವನೂರು ಗ್ರಾಮವನ್ನು ಕೇಂದ್ರವನ್ನಾಗಿರಿಸಿ ಡ್ರೋನ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಿದ ಚಂದ್ರವಳ್ಳಿ ಪ್ರಾದೇಶಿಕ ಪತ್ರಿಕೆಯ ಹೊಳಲ್ಕೆರೆ ತಾಲೂಕಿನ ವರದಿಗಾರ ಮಧು ಅವರ ಕೈಚಳಕ ಎದ್ದು ಕಾಣುತ್ತದೆ. ಅವರ ಸಾಧನೆಯನ್ನೂ ನೋಬೆಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ಸಂಸ್ಥೆ ಗುರುತಿಸಿದೆ ಎಂದು ಮಂಜುನಾಥ್ ರೆಡ್ಡಿ ತಿಳಿಸಿದರು. ಜನಾರ್ಧನ್ ಹಾಗೂ ಮೋಹನ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

 

- Advertisement -  - Advertisement - 
Share This Article
error: Content is protected !!
";