ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಲವಾರು ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಅನ್ನದಾತರತ್ತ ತಿರುಗಿಯೂ ನೋಡದ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ. ಕಳೆದ 2.5 ವರ್ಷಗಳಲ್ಲಿ ಈ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದರೆ ರೈತರ ಆತ್ಮಹತ್ಯೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ! ಇವರ ಆಡಳಿತಾವಧಿಯಲ್ಲಿ 2,809 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಅತ್ಯಂತ ಆಘಾತಕಾರಿ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಇನ್ನೂ ದುರಂತವೆಂದರೆ, ಮೃತಪಟ್ಟ ರೈತರ 339 ಕುಟುಂಬಗಳಿಗೆ ಕಾಂಗ್ರೆಸ್ ಸರ್ಕಾರ ಪರಿಹಾರ ನೀಡಿಲ್ಲ! ತಮ್ಮ ಓಡಾಟ, ಹಾರಾಟಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಮುಖ್ಯಮಂತ್ರಿಗಳಿಗೆ, ನಮ್ಮ ರೈತ ಕುಟುಂಬಗಳ ಕಣ್ಣೀರು ಕಾಣಿಸುತ್ತಿಲ್ಲ, ಕನಿಷ್ಠ ಸಾಂತ್ವನ ಹೇಳಲೂ ಸಮಯವಿಲ್ಲ. ಜನಪರ ಆಡಳಿತದ ಮಾತಂತೂ ದೂರವೇ ಉಳಿಯಿತು!
ಕೂಡಲೇ ನಮ್ಮ ರೈತರಿಗೆ ಭರವಸೆ ಬರುವಂತೆ ಸೂಕ್ತ ಪರಿಹಾರ, ಖರೀದಿ ಕೇಂದ್ರ ತೆರೆದು, ಬೆಂಬಲ ಬೆಲೆ ಖಾತ್ರಿ ನೀಡಿ, ರಾಜ್ಯದ ಪ್ರತಿಯೊಬ್ಬ ಅನ್ನದಾತನಿಗೆ ನ್ಯಾಯ ಒದಗಿಸಿ ಎಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ವಿಜಯೇಂದ್ರ ಆಗ್ರಹಿಸಿದ್ದಾರೆ.

