ಪ್ರಾದೇಶಿಕ ಪಕ್ಷದ 25ನೇ ವರ್ಷಾಚರಣೆ, ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೇ ಮೊದಲು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮ್ಮ ಹೆಮ್ಮೆಯ ಜೆಡಿಎಸ್ ಪಕ್ಷದ ಬೆಳ್ಳಿಹಬ್ಬದ ಸಂಭ್ರಮದಲ್ಲಿ ನಾನು ಅತ್ಯಂತ ಸಂತೋಷದಿಂದ ಭಾಗಿಯಾಗಿದೆ ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಈ ಅರ್ಥಪೂರ್ಣ ಸಮಾರಂಭದಲ್ಲಿ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೇಗೌಡ ಅವರೊಂದಿಗೆ ಪಾಲ್ಗೊಂಡಿದ್ದು ಧನ್ಯತೆಯ ಭಾವ ಮೂಡಿಸಿತು ಎಂದು ಕುಮಾರಸ್ವಾಮಿ ಭಾವುಕರಾದರು.

- Advertisement - 

ಅಸಂಖ್ಯಾತ ಮುಖಂಡರು, ಕಾರ್ಯಕರ್ತರು, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ರಾಷ್ಟ್ರೀಯ ಪ್ರತಿನಿಧಿಗಳ ಸಮ್ಮುಖದಲ್ಲಿ ರಜತ ಮಹೋತ್ಸವದ ಸವಿ ನೆನಪಿಗಾಗಿ ಬೆಳ್ಳಿನಾಣ್ಯ ಲೋಕಾರ್ಪಣೆ ಮಾಡಲಾಯಿತು ಎಂದು ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೇ ಮೊದಲು. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಪ್ರತಿ ತಾಲ್ಲೂಕಿನ ಬೂತ್ ಮಟ್ಟದಲ್ಲಿ  ಜೆಡಿಎಸ್ ಧ್ವಜವನ್ನು ಹಾರಿಸಿದ ನಮ್ಮ ಚಿನ್ನದಂತಹ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.

- Advertisement - 

ರಜತ ಮಹೋತ್ಸವದ ಮುಖ್ಯ ಆಕರ್ಷಣೆಯಾಗಿ ಹೆಚ್. ಡಿ ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಭಾವಚಿತ್ರವಿರುವ ಬೆಳ್ಳಿ ನಾಣ್ಯವನ್ನು ಲೋಕಾರ್ಪಣೆ ಮಾಡಲಾಯಿತು.

ಜೆಡಿಎಸ್ ಪಕ್ಷವು 25 ವರ್ಷಗಳಲ್ಲಿ ಅನೇಕ ಕಷ್ಟಗಳ ಎದುರಿಸಿ ಬೆಳವಣಿಗೆಯನ್ನು ಸಾಧಿಸಿದ್ದು, ಅನೇಕ ಜನಪ್ರತಿನಿಧಿಗಳು ಮತ್ತು ನಾಯಕರನ್ನು ಈ ಪಕ್ಷ ತಯಾರು ಮಾಡಿದೆ.  ಸಭೆಯಲ್ಲಿ ರೈತರಿಗೆ ಅವರ ಬೆಳೆಗಳಿಗೆ ಸೂಕ್ತ ಬೆಂಬಲ ಮತ್ತು ನ್ಯಾಯಸಮ್ಮತ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.

25 ವರ್ಷಗಳ ಕಾಲ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ. ದೇವೇಗೌಡ ರವರು ಹಾಗೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ ಪರವಾಗಿ ಆಡಳಿತ ಮಾಡಿದ ಕುಮಾರಸ್ವಾಮಿ ಅವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ನಿಖಿಲ್ ಹೇಳಿದರು.

ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಆಚರಿಸೋಣ, ಈವರೆಗೆ 52 ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾಳ ಕಾರ್ಯಕ್ರಮ ಮಾಡಿದ್ದೇನೆ ಮುಂಬರುವ ದಿನಗಳಲ್ಲಿ ಎರಡನೇ ಹಂತದ ಪ್ರವಾಸದ ಮೂಲಕ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಆಗಮಿಸುತ್ತೇನೆ ಎಂದು ನಿಖಿಲ್ ತಿಳಿಸಿದರು.

ಮುಂಬರುವ 2028ರ ಚುನಾವಣೆಯಲ್ಲಿ ನಾವು ಈ ಹಿಂದೆ ಗೆದ್ದ 58 ಸ್ಥಾನಗಳನ್ನು ಮೀರಿ ಗೆಲ್ಲಬೇಕಾಗಿದ್ದು, ಅದಕ್ಕಾಗಿ ನಾವೆಲ್ಲರೂ ಬಲಿಷ್ಠವಾಗಿ ಪಕ್ಷ ಕಟ್ಟೋಣ. ಮತ್ತೊಮ್ಮೆ ಕುಮಾರಣ್ಣನವರನ್ನು ರಾಜ್ಯದ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡೋಣ ಎಂದು ನಿಖಿಲ್ ಕರೆ ನೀಡಿದರು.

ಈ ಸಂಭ್ರಮಾಚರಣೆಯಲ್ಲಿ  ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಕೋರ್ ಕಮೀಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಸಂಸದ ಮಲ್ಲೇಶ್ ಬಾಬು, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಹ್ವಾನಿತರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು, ಸಾವಿರಾರು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

 

Share This Article
error: Content is protected !!
";